ಬೆಂಗಳೂರು: ತಂದೆ ತಾಯಿ ಎನಿಸಿಕೊಂಡವರ ಸಂಬಂಧ ಅನಧಿಕೃತ ಇರಬಹುದು. ಆದರೆ, ಹುಟ್ಟುವ ಮಕ್ಕಳು ಅನಧಿಕೃತವಲ್ಲ. ಹೀಗಾಗಿ ಇಂತಹ ಮಕ್ಕಳನ್ನು ಕೂಡ ಅಧಿಕೃತ ಮಕ್ಕಳಂತೆಯೇ ಸಮಾನವಾಗಿ ಕಾನೂನು ಪರಿಗಣಿಸಬೇಕು ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ತಂದೆ ತಾಯಿ ಇಲ್ಲದೆ ಮಗು ಜನಿಸುವುದಿಲ್ಲ. ಜನ್ಮ ಪಡೆಯುವ ಪ್ರಕ್ರಿಯೆಯಲ್ಲಿ ಮಗುವಿನ ಪಾತ್ರ ಏನೇನೂ ಇರುವುದಿಲ್ಲ. ಪೋಷಕರ ಸಂಬಂಧ ಅನಧಿಕೃತ ಇರಬಹುದು. ಆದರೆ, ಮಕ್ಕಳು ಅನಧಿಕೃತವಲ್ಲ ಎಂಬ ಅಂಶವನ್ನು ಕಾನೂನು ಪರಿಗಣಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಂಸತ್ತು ಮಕ್ಕಳೆಲ್ಲರೂ ಸಮಾನರು ಎಂಬ ಕಾನೂನನ್ನು ಜಾರಿಗೊಳಿಸುವ ಮೂಲಕ ವಿವಾಹೇತರ ಸಂಬಂಧದ ಮಕ್ಕಳಿಗೂ ನ್ಯಾಯ ಕೊಡಿಸಲು ಮುಂದಾಗಬೇಕಿದೆ ಎಂದು ಹೈಕೋರ್ಟ್ ಹೇಳಿದೆ.
ಹಿನ್ನೆಲೆ
ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದ ರಾಮನಗರದ ವ್ಯಕ್ತಿಯೊಬ್ಬರು 2014ರಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೃತರ ಎರಡನೇ ಪತ್ನಿಯ ಮಗ ಅನುಕಂಪದ ಆಧಾರದಲ್ಲಿ ನೀಡುವ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಪುತ್ರನ ಈ ಅರ್ಜಿಯನ್ನು ಬೆಸ್ಕಾಂ 2015ರಲ್ಲಿ ತಿರಸ್ಕರಿಸಿತ್ತು.
ಅಲ್ಲದೇ, ತಿರಸ್ಕಾರಕ್ಕೆ ಬಲವಾದ ಸಮರ್ಥನೆ ಕೊಟ್ಟಿದ್ದ ಬೆಸ್ಕಾಂ, 2011ರಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಎರಡನೇ ಪತ್ನಿ ಮಕ್ಕಳು ಅನುಕಂಪದ ನೌಕರಿ ಪಡೆಯಲು ಅರ್ಹರಲ್ಲ ಎಂದು ಸುತ್ತೋಲೆ ಹೊರಡಿಸಿದೆ.
ಮೊದಲ ಪತ್ನಿ ಬದುಕಿದ್ದಾಗಲೇ ಎರಡನೇ ಮದುವೆಯಾದರೆ ಆ ವಿವಾಹವೇ ಅನೂರ್ಜಿತಗೊಳ್ಳುತ್ತದೆ. ಇಂತಹ ಅನಧಿಕೃತ ಪತ್ನಿಯ ಮಕ್ಕಳೂ ಅನಧಿಕೃತವಾದ್ದರಿಂದ ಅನುಕಂಪದ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.
ಬೆಸ್ಕಾಂ ನಿರ್ಣಯ ಹಾಗೂ ಕೆಪಿಟಿಸಿಎಲ್ನ ಸುತ್ತೋಲೆ ಪ್ರಶ್ನಿಸಿ, ಮೃತರ ಎರಡನೇ ಪತ್ನಿ ಮಗ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠವೂ ಮನವಿ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ, ಪೋಷಕರ ಸಂಬಂಧ ಅನಧಿಕೃತ ಎಂದಾಕ್ಷಣ ಮಕ್ಕಳನ್ನೂ ಅನಧಿಕೃತ ಎನ್ನಲು ಸಾಧ್ಯವಿಲ್ಲ. ಹೀಗಾಗಿ ಅರ್ಜಿದಾರರ ಮನವಿಯನ್ನು ಪರಿಗಣಿಸಿ ಎಂದು ಕೆಪಿಟಿಸಿಎಲ್ಗೆ ನಿರ್ದೇಶಿಸಿದೆ.