ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಏಪ್ರಿಲ್- ಮೇ ತಿಂಗಳಲ್ಲಿ ನಡೆಸಲು ತಯಾರಿ ನಡೆದಿತ್ತು. ಈ ಹಿಂದೆ ಅಂತಿಮ ವೇಳಾಪಟ್ಟಿಯನ್ನು ಪಿಯು ಬೋರ್ಡ್ ಬಿಡುಗಡೆ ಮಾಡಿತ್ತು. ಆದರೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ನಡೆಸುವ ಜೆ.ಇ.ಇ ಪರೀಕ್ಷೆಯ ಮೊದಲನೆಯ ಸೆಷನ್ ಅನ್ನು ಏಪ್ರಿಲ್ 16 ರಿಂದ 21 ರವರೆಗೆ ನಡೆಸಲು ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಈಗಾಗಲೇ ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಏಪ್ರಿಲ್ 16ರಿಂದ ಮೇ 06 ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು. ಜೆ.ಇ.ಇ ಪರೀಕ್ಷೆಗಳು ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ದಿನಾಂಕಗಳು ಒಟ್ಟಿಗೆ ಬಂದಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯ ಪರಿಷ್ಕರಿಸಿದ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ವಿದ್ಯಾರ್ಥಿಗಳು/ಪೋಷಕರುಗಳಿಂದ ಆಕ್ಷೇಪಣೆಗಳನ್ನು ಸಲ್ಲಿಸಲು ಮಾರ್ಚ್ 5ರ ಸಂಜೆ 5:00 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು jdexam.dpue@gmail.com ಇ-ಮೇಲ್ ವಿಳಾಸಕ್ಕೆ ಮಾತ್ರ ಕಳುಹಿಸಲು ತಿಳಿಸಿದೆ. ಅಂಚೆ ಮೂಲಕ ಹಾಗೂ ನಿಗದಿಪಡಿಸಿದ ದಿನಾಂಕದ ನಂತರ ಬರುವಂತಹ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪಿಯು ಬೋರ್ಡ್ ಪ್ರಕಟಣೆ ಹೊರಡಿಸಿದೆ.