ಬೆಂಗಳೂರು: ಹಿಂದೂ ವಿವಾಹ ಕಾಯಿದೆ ಪ್ರಕಾರ ಎರಡನೇ ಮದುವೆ ಕಾನೂನು ಬಾಹಿರವಾದರೂ, ಅನೈತಿಕವಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಆದೇಶವನ್ನು ಪ್ರಸ್ತಾಪಿಸಿರುವ ಹೈಕೋರ್ಟ್, ಎರಡನೇ ಪತ್ನಿ ಮತ್ತು ಆಕೆಯ ಮಗನಿಗೆ ಜೀವನಾಂಶ ನೀಡಲು ವ್ಯಕ್ತಿಯೊಬ್ಬರಿಗೆ ನಿರ್ದೇಶನ ನೀಡಿದೆ. ಮೊದಲ ವಿವಾಹವಾಗಿರುವುದನ್ನು ಮರೆಮಾಚಿ ಎರಡನೇ ಮದುವೆಯಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ ಪತಿಯಿಂದ ದೂರವಿದ್ದು, ಜೀವನಾಂಶ ಕೋರಿ ಬೆಂಗಳೂರು ನಗರದ ಯಶವಂತಪುರದ ನಿವಾಸಿ ಶೈಲಜಾ (ಹೆಸರು ಬದಲಿಸಲಾಗಿದೆ) ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಸುಪ್ರೀಂಕೋರ್ಟ್ ಹಲವು ಪ್ರಕರಣಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಪುರುಷನಾದವರು ತನ್ನ ಮೊದಲ ವಿವಾಹದ ಬಗ್ಗೆ ಮಾಹಿತಿ ನೀಡದೇ ಎರಡನೇ ವಿವಾಹವಾದಲ್ಲಿ ಎರಡನೇ ಪತ್ನಿ ಮತ್ತು ಆಕೆಯ ಮಕ್ಕಳ ಪೋಷಣೆಗೆ ಬದ್ಧರಾಗಿರಬೇಕು. ಅಲ್ಲದೇ, ಜೀವನಾಂಶದ ಉದ್ದೇಶಕ್ಕಾಗಿ ಕಾನೂನು ಬದ್ಧ ಹೆಂಡತಿಯಂತೆ ಪರಿಗಣಿಸಬೇಕು ಎಂದು ನಿರ್ದೆಶನ ನೀಡಿದೆ.
ಅಲ್ಲದೆ, ಹಿಂದೂ ವಿವಾಹ ಕಾಯಿದೆ ಪ್ರಕಾರ ಎರಡನೇ ಮದುವೆ ಅಸಿಂಧುವಾದರೂ, ಅವು ಅನೈತಿಕವಲ್ಲ. ಹೀಗಾಗಿ ಆರ್ಥಿಕವಾಗಿ ಪತಿಯನ್ನು ಅವಲಂಬಿಸಿದ್ದು, ಜೀವನಾಂಶ ನಿರಾಕರಿಸುವಂತಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಹೀಗಾಗಿ ಪ್ರತಿವಾದಿಯಾಗಿರುವವರು ಅರ್ಜಿದಾರರ ಜೀವನಾಂಶ ಪರಿಹಾರವನ್ನು ಮಹಿಳೆಗೆ 3 ಸಾವಿರ ಮತ್ತು 5 ವರ್ಷದ ಮಗುವಿಗೆ 2 ಸಾವಿರ ರೂನಂತೆ ಮಾಸಿಕ ಪರಿಹಾರ ನೀಡಬೇಕು ಎಂದು ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು ?:ಅರ್ಜಿದಾರ ಮಹಿಳೆ ಸುಮಾರು 25 ವರ್ಷಗಳ ಹಿಂದೆ ಪ್ರತಿವಾದಿಯವರನ್ನು ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಈ ಸಂದರ್ಭದಲ್ಲಿ ಪ್ರತಿವಾದಿ ಮೊದಲ ಮದುವೆ ಆಗಿದ್ದ ಅಂಶವನ್ನು ಮರೆಮಾಚಿದ್ದರು. ಕೆಲ ದಿನಗಳ ಬಳಿಕ ಪತ್ನಿ ಗರ್ಭಿಣಿಯಾಗಿದ್ದು, ಪತಿ ಕಿರುಕುಳ ನೀಡುವುದಕ್ಕೆ ಪ್ರಾರಂಭಿಸಿದ್ದರು. ಅಲ್ಲದೆ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುವುದಕ್ಕೂ ಮುಂದಾಗಿದ್ದರು. ಇದರಿಂದ ಬೇಸತ್ತು ಅರ್ಜಿದಾರರು ತವರು ಮನೆಗೆ ಹೋಗಿ ಜೀವನ ನಡೆಸುತ್ತಿದ್ದರು. ಈ ನಡುವೆ ತನಗೆ ಹಾಗೂ ಮಗುವಿನ ಪೋಷಣೆಗೆ ಜೀವನಾಂಶ ಕೋರಿ ತುಮಕೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ದುರುದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.