ಬೆಂಗಳೂರು:ಸಮಾಜ ಕಲ್ಯಾಣ ಇಲಾಖೆಯ ಎಸ್ಸಿಪಿಟಿಎಸ್ಪಿ ಅನುದಾನವನ್ನು ನೆರೆಪೀಡಿತ ಪ್ರದೇಶಗಳಲ್ಲಿ ದಲಿತರಿಗೆ ಮನೆಗಳನ್ನು ನಿರ್ಮಿಸಿಕೊಡಲು ಬಳಸುತ್ತೇವೆ ಎಂದಿರುವುದು ರಾಜ್ಯ ಸರ್ಕಾರದ ನಿರ್ಧಾರಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವೆಂಕಟಸ್ವಾಮಿ ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆದ ರಾಜ್ಯ ಪರಿಷತ್ ಸಭೆ ವೇಳೆ ದಲಿತ ಸಂಘಟನೆಗಳ ಒಕ್ಕೂಟ ಪ್ರತಿನಿಧಿಗಳು ಎಸ್ಸಿಪಿಟಿಎಸ್ಪಿ ಅನುದಾನವನ್ನು ನೆರೆ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯಕ್ಕೆ ಬಳಸದಂತೆ ಮನವಿ ಪತ್ರ ಸಲ್ಲಿಸಿದರು. ಸಿಎಂ ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳಗೆ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸದಂತೆ ಆಗ್ರಹಿಸಿದರು.
ವಿಧಾನಸೌಧದಲ್ಲಿ ಡಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವ ಜೆ.ಸಿ ಮಾಧುಸ್ವಾಮಿ, ಶಾಸಕರಾದ ಎನ್. ಮಹೇಶ್, ರಾಜುಗೌಡ ಸೇರಿ ಹಲವರು ಭಾಗಿಯಾಗಿದ್ದು, ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದಿನ ಸಭೆಯಲ್ಲಿ ಎಸ್ಸಿಪಿಟಿಎಸ್ಪಿ ಯೋಜನೆಯ ಅನುದಾನವನ್ನು ನೆರೆ ಪೀಡಿತ ಪ್ರದೇಶಗಳಲ್ಲಿರುವ ಪರಿಶಿಷ್ಟರ ಪುನರ್ವಸತಿಗೆ ಬಳಸುವಂತೆ ಸೂಚನೆ ನೀಡಲಾಗಿದೆ. ಅದೇ ರೀತಿ ನಗರಾಭಿವೃದ್ಧಿ ಇಲಾಖೆಯು ಎಸ್ಸಿಪಿಟಿಎಸ್ಪಿ ಯೋಜನೆಯ ಅನುದಾನದಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಶೇ. 50 ರಷ್ಟು ಅನುದಾನವನ್ನು ಮನೆ ನಿರ್ಮಾಣ ಹಾಗೂ ಉಳಿದ ಅನುದಾನವನ್ನು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದೆ.
ಎಸ್ಸಿಪಿಟಿಎಸ್ಪಿ ವಿಶೇಷ ಅನುದಾನದಲ್ಲಿ ನೆರೆ ಪೀಡಿತರಿಗೆ ಮನೆ ನಿರ್ಮಾಣ: ಸಿಎಂ
ಎಸ್ಸಿಪಿಟಿಎಸ್ಪಿ ಯೋಜನೆಯ ಅನುದಾನವನ್ನು ದಲಿತರ ಅಭಿವೃದ್ಧಿಗಾಗಿ ಮಾತ್ರ ಮೀಸಲಿರುವ ಹಣವಾಗಿದೆ. ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ. ಹೀಗಾಗಿ ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವೆಂಕಟಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಸಿಎಂ ಯಡಿಯೂಪ್ಪ ಸಭೆಯಲ್ಲಿ ಎಸ್ಸಿಪಿಟಿಎಸ್ಪಿ ಅನುದಾನ ನೆರೆ ಪೀಡಿತ ದಲಿತ ಕಾಲೋನಿಗಳ ಅಭಿವೃದ್ಧಿಗೆ ಬಳಸಲಾಗುವುದು ಎಂದು ತಿಳಿಸಿದ್ದರೂ ದಲಿತ ಸಂಘಟನೆ ಈ ಎಚ್ಚರಿಕೆಯನ್ನು ನೀಡಿದೆ.