ಬೆಂಗಳೂರು: ಹಲವು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಅವಾಂತರ ಸೃಷ್ಟಿಸಿದೆ. ಹಲವು ಕೆರೆಗಳು ತುಂಬಿ ಹರಿದಿವೆ. ವಿಶೇಷವಾಗಿ ಮಹದೇವಪುರ ವಲಯದಾದ್ಯಂತ ಪ್ರವಾಹ ಉಂಟಾಗಿದೆ. ಅಪಾರ್ಟ್‌ಮೆಂಟ್‌ಗಳು ಮತ್ತು ವಿಲ್ಲಾಗಳಿಗೆ ನೀರು ನುಗ್ಗಿದೆ. ಈ ಕುರಿತು ಹಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ಹಲವು ಖ್ಯಾತನಾಮರು ಸಾಮಾಜಿಕ ಜಾಲತಾಣದ ಮೂಲಕ ಸೇವ್ ಬೆಂಗಳೂರು ಎನ್ನುವ ಹ್ಯಾಷ್ ಟ್ಯಾಗ್ ಬಳಸಿ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ನಡುವೆ ಸಿಲಿಕಾನ್ ಸಿಟಿಯಲ್ಲಿ ದಾಖಲೆ ಮಳೆ ಸುರಿದಿರುವುದು ಸಹ ಬೆಳಕಿಗೆ ಬಂದಿದೆ.
ಮುಖ್ಯವಾಗಿ ರೇನ್‌ಬೋ ಡ್ರೈವ್ ಲೇಔಟ್‌ನ ವಿಲ್ಲಾಗಳು ನಾಲ್ಕು ತಿಂಗಳೊಳಗೆ ಎರಡನೇ ಬಾರಿಗೆ ಸಂಪೂರ್ಣ ಜಲಾವೃತಗೊಂಡಿವೆ. ಅಗ್ನಿಶಾಮಕ ಮತ್ತು ತುರ್ತು ಸಿಬ್ಬಂದಿ ಟ್ರ್ಯಾಕ್ಟರ್ ಹಾಗೂ ದೋಣಿಗಳಲ್ಲಿ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಅನುಗ್ರಹ ಲೇಔಟ್ ಕೂಡ ಜಲಾವೃತಗೊಂಡಿದ್ದು, ಮಹದೇವಪುರದಲ್ಲಿ ಸುಮಾರು 50 ಪೌರಕಾರ್ಮಿಕರ ಶೆಡ್‌ಗಳು ಹೆಚ್ಚು ಹಾನಿಗೊಳಗಾಗಿವೆ. ಮಳೆಯಿಂದಾಗಿ ಹೊರ ವರ್ತುಲ ರಸ್ತೆಯ ಉದ್ದಕ್ಕೂ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದೆ. ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ನಗರ ಮುನ್ಸಿಪಲ್ ಕಾರ್ಪೊರೇಷನ್ (ಸಿಎಂಸಿ) ಕಾಲದಿಂದಲೂ ಈ ಸಮಸ್ಯೆ ಇದೆ. ಇಲ್ಲಿನ ಹಲವು ಪ್ರದೇಶಗಳಲ್ಲಿ ಮಳೆ ನೀರು ಸರಾಗವಾಗಿ ಹೋಗುತ್ತಿದ್ದ ಚರಂಡಿಗಳು ಅತಿಕ್ರಮಣಗೊಂಡಿವೆ ಎಂದು ಹೇಳಿದ್ದಾರೆ.
ಬೆಳ್ಳಂದೂರಿನ ಇಕೋಸ್ಪೇಸ್ ಬಳಿ ಮಾರತ್ತಹಳ್ಳಿ ಹೊರ ವರ್ತುಲ ರಸ್ತೆಯಲ್ಲಿ ಪ್ರವಾಹ ಉಂಟಾಗಿರುವುದು ಚರಂಡಿಯನ್ನು ಅತಿಕ್ರಮಿಸಿದ ಪರಿಣಾಮವಾಗಿದೆ. ಈ ಬಗ್ಗೆ ನಿವಾಸಿಗಳು ಅರಿತುಕೊಂಡು ಸ್ವಲ್ಪ ಭೂಮಿಯನ್ನು ತೆರವುಗೊಳಿಸಲು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಕಾಲುವೆ ನಿರ್ಮಿಸಲು ಪಾಲಿಕೆಗೆ ಮನವಿ ಮಾಡಿದ್ದಾರೆ. ಬಾಕ್ಸ್‌ಗಳನ್ನು ಹಾಕಿ ಚರಂಡಿಗೆ ಸಂಪರ್ಕ ಕಲ್ಪಿಸಬೇಕಾಗಿದೆ ಎಂದು ತಿಳಿಸಿದ್ದಾರೆ.