ಬೆಂಗಳೂರು:ಸ್ವಾತಂತ್ರ್ಯ ವೀರ ಸಾವರ್ಕರ್ ಮಹಾ ಕ್ರಾಂತಿಕಾರಿ ಹೋರಾಟಗಾರ. ಹೀಗಾಗಿ ಬರುವ ಸಾರ್ವಜನಿಕ ಗಣೇಶೋತ್ಸವದಲ್ಲಿ 'ಸಾವರ್ಕರ್ ಉತ್ಸವ' ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಕೂರಿಸುವ ಸ್ಥಳಗಳಲ್ಲಿ ಸಾವರ್ಕರ್ ಫೋಟೋ ಇಡುವಂತೆ ಸಂಘಟಕರಿಗೆ ಮನವಿ ಮಾಡಲಾಗುವುದು. ಅದೇ ರೀತಿ ಸಾವರ್ಕರ್ ಅವರ ಹೋರಾಟದ ಬಗ್ಗೆ ಜನರಿಗೆ ತಿಳಿಸಲು ಅವರ ಹೋರಾಟದ ಚಿತ್ರದ ಪ್ರದರ್ಶನ, ಸಾವರ್ಕರ್ ಕುರಿತು ಉಪನ್ಯಾಸಗಳನ್ನು ಏರ್ಪಡಿಸಲಾಗುವುದು ಎಂದು ಹೇಳಿದರು.
ಅಲ್ಲದೇ, ಸಾವರ್ಕರ್ ಕುರಿತ ನಾಟಕ, ನೃತ್ಯ ರೂಪಕ ಆಯೋಜಿಸಲಾಗುವುದು. ಸಾವರ್ಕರ್ ರಚಿಸಿದ ಹಾಡುಗಳನ್ನು ಹಾಡುವುದು, ಸಾವರ್ಕರ್ ಅವರ ಬಗ್ಗೆ ಕಥಾ ಸ್ಪರ್ಧೆ, ಹಾಡುಗಳ ಸ್ಪರ್ಧೆ, ಚಿತ್ರಗಳ ಸ್ಪರ್ಧೆ, ಕ್ವಿಜ್ ಇತ್ಯಾದಿಗಳನ್ನು ಏರ್ಪಡಿಸುವುದು ಹಾಗೂ ಸಾವರ್ಕರ್ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಾಡುವುದು ಬಗ್ಗೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಾವರ್ಕರ್ಗೆ ಅವಮಾನ ಸಹಿಸಲು ಸಾಧ್ಯವಿಲ್ಲ:ಸಾವರ್ಕರ್ ಅವರಿಗೆ ಅಪಮಾನ ಮಾಡುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಕರಿ ನೀರಿನ ಶಿಕ್ಷೆ ಅನುಭವಿಸಿದ ಏಕೈಕ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕುರಿತ ಸಾವರ್ಕರ್ ಪುಸ್ತಕವನ್ನು ಪ್ರಕಟಣೆಯ ಪೂರ್ವವೇ ಬ್ರಿಟಿಷರು ನಿರ್ಬಂಧ ಮಾಡಿದ್ದರು. ಅನೇಕ ಇತಿಹಾಸಗಳನ್ನು ಸೃಷ್ಟಿಸಿದ ಮಹಾನ್ ಕ್ರಾಂತಿಕಾರಿ ಸಾವರ್ಕರ್ ಅವರಿಗೆ ಮೇಲಿಂದ ಮೇಲೆ ಅವಮಾನ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮುತಾಲಿಕ್ ಹೇಳಿದರು.
ವಕ್ಫ್ ಬೋರ್ಡ್ ಅಧ್ಯಕ್ಷರ ವಜಾಕ್ಕೆ ಆಗ್ರಹ : ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸಾಅದಿ ಇವರನ್ನು ಕೂಡಲೆ ವಜಾಗೊಳಿಸಬೇಕು. ಶಾಲೆಗಳಲ್ಲಿ ಮತೀಯವಾದಕ್ಕೆ ಅವರು ಒತ್ತಾಯಿಸುತ್ತಿದ್ದಾರೆ. ನಮಾಜ್‌ಗೆ ಅವಕಾಶ ಹಾಗೂ ಪ್ರತ್ಯೇಕ ಕೊಠಡಿಗೆ ಬೇಡಿಕೆ ಮತ್ತು ಖುರಾನ್ ಪಠಣ ಇತ್ಯಾದಿಗಳಿಗೆ ಆಗ್ರಹಿಸುತ್ತಿರುವುದು ಮೂರ್ಖತನವಾಗಿದೆ ಎಂದು ವಾಗ್ದಾಳಿ ನಡೆಸಿದರು.