ಬೆಂಗಳೂರು :ಸ್ಯಾಂಡಲ್‌ವುಡ್ ಡ್ರಗ್ಸ್ ಮಾರಾಟ ಜಾಲ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಹಾಗೂ ತನಿಖೆಯನ್ನು ಹೈಕೋರ್ಟ್ ಮೇಲ್ವಿಚಾರಣೆ ನಡೆಸಬೇಕು ಎಂದು ಕೋರಿ ಪಿಐಎಲ್ ಅರ್ಜಿ ಸಲ್ಲಿಸಲಾಗಿದೆ. ಬೆಂಗಳೂರಿನ ವಕೀಲೆ ಗೀತಾ ಮಿಶ್ರಾ ಹೈಕೋರ್ಟ್‌ಗೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಮತ್ತು ಕಾಟನ್‌ಪೇಟೆ ಪೊಲೀಸ್ ಠಾಣೆಯನ್ನು ಪ್ರತಿವಾದಿಯನ್ನಾಗಿ ನಮೂದಿಸಲಾಗಿದೆ.
ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ.. ಎಸ್ಐಟಿ ರಚನೆ ಕೋರಿ ಹೈಕೋರ್ಟ್‌ಗೆ ಪಿಐಎಲ್
ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ನಟ-ನಟಿಯರು, ರಾಜಕೀಯ ವ್ಯಕ್ತಿಗಳು, ವಿವಿಐಪಿ ಮಕ್ಕಳು ಮತ್ತು ಉದ್ಯಮಿಗಳು ಭಾಗಿಯಾಗಿದ್ದಾರೆ. ನಗರದಲ್ಲಿ ಅನೇಕ ಸಂದರ್ಭದಲ್ಲಿ ವಿವಿಐಪಿ ಮಕ್ಕಳು ಡ್ರಗ್ಸ್ ಹಾಗೂ ಮದ್ಯಪಾನ ಸೇವಿಸಿ ರಸ್ತೆ ಅಪಘಾತ ನಡೆಸಿದ್ದಾರೆ. ಆದರೆ, ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ..
ಪಿಐಎಲ್ ಸಾರಾಂಶ :ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ನಟ-ನಟಿಯರು, ರಾಜಕೀಯ ವ್ಯಕ್ತಿಗಳು, ವಿವಿಐಪಿ ಮಕ್ಕಳು ಮತ್ತು ಉದ್ಯಮಿಗಳು ಭಾಗಿಯಾಗಿದ್ದಾರೆ. ನಗರದಲ್ಲಿ ಅನೇಕ ಸಂದರ್ಭದಲ್ಲಿ ವಿವಿಐಪಿ ಮಕ್ಕಳು ಡ್ರಗ್ಸ್ ಹಾಗೂ ಮದ್ಯಪಾನ ಸೇವಿಸಿ ರಸ್ತೆ ಅಪಘಾತ ನಡೆಸಿದ್ದಾರೆ. ಆದರೆ, ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ರಸ್ತೆ ಅಪಘಾತ ಉಂಟುಮಾಡಿದ ನಟಿ ಶರ್ಮಿಳಾ ಮಾಂಡ್ರೆ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ. 2017ರಲ್ಲಿ ದಿ.ಸಂಸದರೊಬ್ಬರ ಮೊಮ್ಮಗ, ಬೆಂಗಳೂರಿನ ಶಾಂತಿನಗರ ಶಾಸಕರ ಪುತ್ರನ ವಿರುದ್ಧ ಇದೇ ಆರೋಪ ಕೇಳಿ ಬಂದಿತ್ತು.
ಅಲ್ಲದೆ, ಡ್ರಗ್ಸ್ ಮಾರಾಟ ಪ್ರಕರಣವನ್ನು ಸಿಸಿಬಿ ನಿಧಾನಗತಿಯಲ್ಲಿ ತನಿಖೆ ನಡೆಸುತ್ತಿದೆ. ಎಫ್‌ಐಆರ್‌ನಲ್ಲಿ ಹೆಸರಿಸಿರುವ ಪ್ರಭಾವಿಗಳನ್ನು ಇನ್ನೂ ವಶಕ್ಕೆ ಪಡೆದಿಲ್ಲ. ಸಿಸಿಬಿ ಪೊಲೀಸರ ಮೇಲೆ ಪ್ರಭಾವಿಗಳು ಒತ್ತಡ ಹೇರುವ ಸಾಧ್ಯತೆಯಿದ್ದು, ತನಿಖೆಗೆ ಅಡ್ಡಿಯಾಗಲಿದೆ. ಪೊಲೀಸರು ತನಿಖೆಯಲ್ಲೂ ಸಾಕಷ್ಟು ಲೋಪ ಎಸಗಿದ್ದು, ಆರೋಪಿಗಳು ಸುಲಭದಲ್ಲಿ ಜಾಮೀನು ಪಡೆಯಲಿದ್ದಾರೆ. ಹೀಗಾಗಿ, ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಬೇಕು ಮತ್ತು ತನಿಖೆಯನ್ನು ಹೈಕೋರ್ಟ್ ಮೇಲ್ವಿಚಾರಣೆ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.