ಬೆಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳಿಬ್ಬರಿಗೆ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ಜಾಮೀನು ನೀಡಲು ತಿರಸ್ಕರಿಸಿದೆ.
ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಒಂದನೇ ಆರೋಪಿ ಇರ್ಫಾನ್ ಪಾಷಾ ಹಾಗೂ ನಾಲ್ಕನೇ ಆರೋಪಿ ಮೊಹಮ್ಮದ್ ಮುಜೀಬ್ ಉಲ್ಲಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಡಾ. ಕಸನಪ್ಪ ನಾಯಕ್ ವಿಚಾರಣೆ ನಡೆಸಿ, ಆರೋಪಿಗಳ ಜಾಮೀನು ಕೋರಿಕೆಯನ್ನು ತಿರಸ್ಕರಿಸಿದ್ದಾರೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಯಾರೋ ಅಪರಿಚಿತ ದುಷ್ಕರ್ಮಿಗಳು ಮೋಟರ್ ಬೈಕ್ನಲ್ಲಿ ಬಂದು ರುದ್ರೇಶ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಆದರೆ, ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದಿದ್ದರೂ, ಆಧಾರವಿಲ್ಲದಿದ್ದರೂ ಅರ್ಜಿದಾರರನ್ನು ಎನ್ಐಎ ಅಧಿಕಾರಿಗಳು 2016ರ ಅಕ್ಟೋಬರ್ 27ರಂದು ಬಂಧಿಸಿದ್ದಾರೆ. ಅಧಿಕಾರಿಗಳು ಆರೋಪಿಸಿರುವಂತೆ ಅವರು ಪಿಎಫ್ಐ ಸದಸ್ಯರೂ ಅಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ಕೋರಿದ್ದರು.
ಎನ್ಐಎ ಪರ ವಾದ ಮಂಡಿಸಿದ್ದ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್, ಆರೋಪಿಗಳು ಆರ್ ಎಸ್ಎಸ್ ಪಥಸಂಚಲನದ ವೇಳೆ ಕನಿಷ್ಠ ಇಬ್ಬರು ಕಾರ್ಯಕರ್ತರನ್ನು ಕೊಲ್ಲುವ ಉದ್ದೇಶದೊಂದಿಗೆ ಸಾಕಷ್ಟು ಸಭೆ ನಡೆಸಿದ್ದರು. ಅದರಂತೆ ಪೂರ್ವಯೋಜಿತ ತಯಾರಿ ಮಾಡಿ ಕಾರ್ಯಕರ್ತ ರುದ್ರೇಶ್ ಅವರನ್ನು ಹತ್ಯೆ ಮಾಡಿದ್ದಾರೆ. ಈ ಸಂಬಂಧ ಎನ್ಐಎ ಎಲ್ಲ ಸಾಂದರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಅಲ್ಲದೇ, ಆರೋಪಿಗಳಿಗೆ ಈ ಹಿಂದೆಯೂ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ ಜಾಮೀನು ನಿರಾಕರಿಸಿವೆ. ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳಿದ್ದು ಅವರಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು. ಎನ್ಐಎ ಪರ ವಿಶೇಷ ಅಭಿಯೋಜಕರ ವಾದ ಪುರಸ್ಕಿರಿರುವ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಪ್ರಕರಣದ ಹಿನ್ನೆಲೆ - 2016ರ ಅಕ್ಟೋಬರ್ 16ರಂದು ಆರ್ ಎಸ್ ಎಸ್ ಪಥ ಸಂಚಲನ ಮುಗಿಸಿ ವಾಪಸ್ಸಾಗುತ್ತಿದ್ದ ರುದ್ರೇಶ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಶಿವಾಜಿನಗರದ ಕಾಮರಾಜ ರಸ್ತೆಯ ಮೆಡಿಕಲ್ ಶಾಪ್ ಬಳಿ ನಿಂತಿದ್ದ ರುದ್ರೇಶ್ ಮೇಲೆ ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಚ್ಚಿನಿಂದ ದಾಳಿ ಮಾಡಿದ್ದರು. ಘಟನೆ ಸಂಬಂಧ ಕಮರ್ಷಿಯಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಲಾಗಿತ್ತು.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 109, 120 ಬಿ, 150, 153, 201 ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3, 27, ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯ ಸೆಕ್ಷನ್ 15, 16, 17, 18, 19 ಹಾಗೂ 20 ರ ಅಡಿ ಆರೋಪ ಹೊರಿಸಲಾಗಿದೆ.