ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಇದಕ್ಕಾಗಿ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್, ಜಾತ್ಯತೀತ ಜನತಾದಳ, ಆಮ್ ಆದ್ಮಿ ಪಕ್ಷ ಸೇರಿದಂತೆ ಇತರರು ಚುನಾವಣಾ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಹಲವು ತಂತ್ರಗಳನ್ನು ಹೆಣೆಯುತ್ತಿದ್ದಾರೆ. ನಾಯಕರ ಮಧ್ಯೆ ಆರೋಪ, ಪ್ರತ್ಯಾರೋಪ ಮತ್ತು ಟೀಕೆಗಳು ಜೋರಾಗಿವೆ. ಈ ನಿಟ್ಟಿನಲ್ಲಿ ಪಂಚರತ್ನ ರಥಯಾತ್ರೆ ಆರಂಭಿಸಿರುವ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಮುಂದಿನ ಸಿಎಂ ಮಾಡಲು ಆರ್ಎಸ್ಎಸ್ ನಿರ್ಧಾರ ಮಾಡಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಹ್ಲಾದ್ ಜೋಶಿ ಸಿಎಂ ಮಾಡಲು ಆರ್ಎಸ್ಎಸ್ ನಿರ್ಧಾರ: ದಾಸರಹಳ್ಳಿ ಪಂಚರತ್ನಯಾತ್ರೆ ವೇಳೆ ಮಾತನಾಡಿದ ಅವರು, ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡಿ, 8 ಮಂದಿ ಉಪಮುಖ್ಯಮಂತ್ರಿ ಮಾಡುವ ಪ್ಲಾನ್ ಬಗ್ಗೆ ಆರ್ಎಸ್ ಎಸ್ ದೆಹಲಿ ಕಚೇರಿಯಲ್ಲಿ ಚರ್ಚೆ ನಡೆದಿದೆ. ಪ್ರಹ್ಲಾದ್ ಜೋಶಿ ಅವರನ್ನು ಬಿಜೆಪಿ ಮುಂದಿನ ಸಿಎಂ ಮಾಡಲು ಆರ್ ಎಸ್ ಎಸ್ ನಿರ್ಧಾರ ಮಾಡಿದೆ ಎಂದು ಆರೋಪಿಸಿದರು. ಹೀಗಾಗಿ ನಿನ್ನೆಯಿಂದ ನಮ್ಮ ಮೇಲೆ ಗಧಾ ಪ್ರಹಾರ ಶುರು ಮಾಡಿದ್ದಾರೆ. ಅವರು ಶೃಂಗೇರಿ ಮಠ ಧ್ವಂಸ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಸೇರಿದವರು. ಅವರಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ ಬೇಕಿಲ್ಲ. ನಮ್ಮ ಭಾಗದ ಹಳೇ ಮೈಸೂರು ಭಾಗದ ಬ್ರಾಹ್ಮಣ ವರ್ಗಕ್ಕೆ ಸೇರಿದವರಲ್ಲ ಎಂದು ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದ ಪೇಶ್ವೆ ವಂಶಕ್ಕೆ ಸೇರಿದ ಜೋಶಿ:ಜೆಡಿಎಸ್‌ದು ಪಂಚರತ್ನ ಯಾತ್ರೆಯಲ್ಲ, ಕುಟುಂಬದ ನವಗ್ರಹ ಯಾತ್ರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಹಳೇ ಮೈಸೂರು ಭಾಗದ ಬ್ರಾಹ್ಮಣರು ಸರ್ವೇ ಜನೋ ಸುಖಿನೋ ಭವಂತು ಎನ್ನುವವರು. ಆದರೆ ಪ್ರಹ್ಲಾದ ಜೋಶಿ ಅವರು ಮಹಾರಾಷ್ಟ್ರದ ಪೇಶ್ವೆ ವಂಶಕ್ಕೆ ಸೇರಿದವರು. ಅವರಿಗೆ ಸಂಸ್ಕೃತಿ ಇಲ್ಲ. ಅವರಿಗೆ ದೇಶ ಒಡೆಯುವಂತದ್ದು, ಕುತಂತ್ರ ರಾಜಕಾರಣ ಮಾಡುವಂತದ್ದು, ದೇಶಭಕ್ತಿಯ ಹೆಸರಲ್ಲಿ ದೇಶಕ್ಕೆ ಕೊಡುಗೆ ಕೊಟ್ಟಂತವರನ್ನು ಮಾರಣಹೋಮ ಮಾಡುವಂತದ್ದು. ಈ ವರ್ಗದವರಿಂದ ಬಂದವರ ಕೃತ್ಯ. ರಾಜ್ಯದ ವೀರಶೈವ, ಒಕ್ಕಲಿಗ, ಹಿಂದುಳಿದ, ದಲಿತ ಸಮುದಾಯ ಬಿಜೆಪಿಯ ಆರ್ ಎಸ್ ಎಸ್ ಹುನ್ನಾರಕ್ಕೆ ಮರಳಾಗಬೇಡಿ. ಈ ರಾಜ್ಯವನ್ನು ಅವರು ಒಡೆಯುತ್ತಾರೆ. ರಾಜ್ಯವನ್ನು ಕುಲಗೆಡಿಸುವ ಇಂಥವರ ವಿರುದ್ಧ ನನ್ನ ಹೋರಾಟ ಎಂದು ಕುಮಾರಸ್ವಾಮಿ ಗುಡುಗಿದರು.