ಬೆಂಗಳೂರು: “ವ್ಯಾಪಾರ ಬಂದ್ ಮಾಡಿ ಒಂದು ತಿಂಗಳಾಗುತ್ತಾ ಬಂದಿದ್ದು, ದುಡಿಮೆ ಇಲ್ಲದೆ ಮನೆಯಲ್ಲಿಯೇ ಕೂರುವಂತಾಗಿದೆ. ಮೇ. 3ರವರೆಗೂ ಲಾಕ್ಡೌನ್ ಇರುವುದರಿಂದ ನಮ್ಮ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ನಮ್ಮನ್ನು ಕೇಳುವವರೇ ಇಲ್ಲ” ಎಂದು ರಸ್ತೆ ಬದಿ ಟೀ, ತಿಂಡಿ, ಊಟ ಮಾರಾಟ ಮಾಡುವ ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ದುಡಿಮೆಯಿಲ್ಲದೇ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಕೊರೊನಾ ವೈರಸ್ ಹರಡದಂತೆ ತಡೆಯಲು ಕ್ರಮ ಕೈಗೊಂಡಿರುವ ಸರ್ಕಾರ ಮತ್ತು ಮಹಾನಗರ ಪಾಲಿಕೆ ರಸ್ತೆ ಬದಿಯ ವ್ಯಾಪಾರಕ್ಕೆ ನಿರ್ಬಂಧ ವಿಧಿಸಿದೆ. ಇದರಿಂದ ರಸ್ತೆ ಬದಿಯಲ್ಲಿ ಟೀ, ಬಜ್ಜಿ, ತಿಂಡಿ, ಎಗ್ ರೈಸ್, ಗೋಬಿ ಮಂಚೂರಿ, ಪಾನಿಪುರಿ ಸೇರಿದಂತೆ ಇತರ ತಿಂಡಿಗಳನ್ನು ಮಾರಾಟ ಮಾಡುತ್ತಿದ್ದ ಸಾವಿರಾರು ಮಂದಿ ಸಂಪಾದನೆ ಇಲ್ಲದೆ ಕೂರುವಂತಾಗಿದೆ.
ಕೊರೊನಾ ಎಫೆಕ್ಟ್ನಿಂದ ಕಂಗಾಲಾಗಿರುವ ರಸ್ತೆ ಬದಿಯ ತಿಂಡಿ ವ್ಯಾಪಾರಿಗಳು ಇದರ ಜೊತೆಗೆ ನಗರದಲ್ಲಿ ಸುಮಾರು 1,300ಕ್ಕೂ ಹೆಚ್ಚು ಡಾಬಾ ಅಂಗಡಿಗಳು ಬಂದ್ ಆಗಿವೆ. ರಾಜ್ಯದ ಹಲವು ಜಿಲ್ಲೆಗಳಿಂದ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಸಾಕಷ್ಟು ಯುವಕರು ಕೆಲಸ ಸಿಗದೆ ಕೊನೆಗೆ ರಸ್ತೆ ಬದಿ ಕಾಫಿ, ಟೀ, ಬಜ್ಜಿ, ತಿಂಡಿ ಮಾರಾಟ ಮಾಡಲು ಆರಂಭಿಸಿದ್ದರು. ಇನ್ನು ಕೆಲವರು ಬೆಳಗ್ಗೆ ಕೆಲಸಕ್ಕೆ ಹೋಗಿ ಸಂಜೆ ರಸ್ತೆ ಬದಿ ಮೊಬೈಲ್ ಆಟೋ ಹಾಕಿಕೊಂಡು ಕಬಾಬ್, ಎಗ್ ರೈಸ್ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದರು. ಇಂತಹ ವ್ಯಾಪಾರಸ್ಥರಿಗೆ ಆಸರೆಯಾಗಿದ್ದದ್ದು ರೈಲ್ವೆ ನಿಲ್ದಾಣ ಹಾಗೂ ಮೆಜೆಸ್ಟಿಕ್ ಬಸ್ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳು. ಹೊರ ರಾಜ್ಯ, ಹೊರ ಜಿಲ್ಲೆ ಮತ್ತಿತರ ಕಡೆಗಳಿಗೆ ಹೋಗುವ ಪ್ರಯಾಣಿಕರು, ಕೂಲಿ ಹಾಗೂ ಕಟ್ಟಡ ಕಾರ್ಮಿಕರಿಗೆ ಬೀದಿ ಬದಿ ತಿಂಡಿ, ಊಟ ವ್ಯಾಪರಸ್ಥರೇ ಆಸರೆಯಾಗಿದ್ದರು.
ನಗರದಲ್ಲಿ ಸುಮಾರು 10 ರಿಂದ 15 ಸಾವಿರ ಇಂತಹ ವ್ಯಾಪಾರಿಗಳಿದ್ದಾರೆ. ಪ್ರತಿ ದಿನ 2 ರಿಂದ 5 ಸಾವಿರ ರೂ.ವರೆಗೂ ವ್ಯಾಪಾರ ಮಾಡುತ್ತಿದ್ದರು. ಪ್ರತಿದಿನ ಬರುವ ಆದಾಯದಲ್ಲಿಯೇ ಅವರ ಜೀವನ ನಡೆಸುತ್ತಿದ್ದರು. ಇಷ್ಟು ದಿನಗಳವರೆಗೆ ಕೂಡಿಟ್ಟುಕೊಂಡಿದ್ದ ಒಂದಿಷ್ಟು ಹಣದಿಂದ ಇಲ್ಲಿಯವರೆಗೆ ಬದುಕು ಸಾಗಿಬಂತು. ಇನ್ನು ಮುಂದೆಯೂ ಇದೇ ಸ್ಥಿತಿ ಮುಂದುವರಿದರೆ ತಮ್ಮ ಬದುಕು ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡರು. ಕೊರೊನಾ ಸೋಂಕು ನಿಯಂತ್ರಣಕ್ಕೆ ಬೇಗ ಬರಬಹುದು. 10-15 ದಿನಗಳಲ್ಲೇ ಮುಗಿಯಬಹುದು ಎಂದುಕೊಂಡಿದ್ದೆವು. ಆದರೆ, ಈಗ ಒಂದು ತಿಂಗಳಾಯಿತು, ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇನ್ನು ಹದಿನೈದು ದಿನ ಅಂದರೆ ನಾವು ಬದುಕುವುದು ಹೇಗೆ? ಎಂದು ಸಣ್ಣಅಂಗಡಿ ಇಟ್ಟುಕೊಂಡಿರುವ ರಾಜು ಅವರ ತಮ್ಮ ಸಂಕಷ್ಟದ ಪರಿಸ್ಥಿತಿಯನ್ನು ಬಿಚ್ಚಿಟ್ಟರು.
ತರಕಾರಿ, ಹೂ, ಹಣ್ಣು, ಬಟ್ಟೆ ಆಹಾರ ಮತ್ತಿತರ ವ್ಯಾಪಾರಿಗಳು ಸೇರಿದಂತೆ ರಾಜ್ಯಾದ್ಯಂತ 4.80 ಲಕ್ಷ ಮಂದಿ ರಸ್ತೆ ಬದಿ ವ್ಯಾಪಾರಿಗಳಿದ್ದಾರೆ. ಸರ್ಕಾರ 1.80 ಲಕ್ಷ ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿದೆ. ಇದರಲ್ಲಿ ಸುಮಾರು 10 ರಿಂದ 15 ಸಾವಿರ ತಿಂಡಿ, ಊಟ ತಯಾರಿಸಿ ಮಾರಾಟ ಮಾಡುವವರಿದ್ದಾರೆ. ಹಾಗಾಗಿ, ಸರ್ಕಾರ ಈ ಬಗ್ಗೆ ಗಮನಹರಿಸಿ ಮುಖ್ಯಮಂತ್ರಿಗಳು ಪರಿಹಾರ ನೀಡಬೇಕೆಂದು ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ರಂಗಸ್ವಾಮಿ ಮನವಿ ಮಾಡಿದ್ದಾರೆ.