ಕರ್ನಾಟಕ

karnataka

ETV Bharat / state

ದಶಕ‌ ಕಳೆದರೂ ಸರಿಹೋಗದ ಆನೇಕಲ್​ ರಸ್ತೆ.. ಸಂಚಾರಿಗಳಿಗೆ ಪ್ರಸವ ವೇದನೆ

ಮಳೆಗಾಲದಲ್ಲಿ ಅತ್ತಿಬೆಲೆಯಿಂದ ಬಳ್ಳೂರು ರಸ್ತೆಯ ಟಿವಿಎಸ್ ವೃತ್ತದಲ್ಲಿ ಗುಂಡಿಗಳು ಬಿದ್ದು ಸಂಚಾರ ದುಸ್ತರವಾಗಿದೆ. ಇದು ರಸ್ತೆಯೋ ಹೊಂಡವೋ ಎಂಬುದು ತಿಳಿಯದಾಗಿದೆ. ಇಲ್ಲಿ ಸಂಚಾರಿಗಳಿಗೆ ಪ್ರಸವ ವೇದನೆ ಆಗುತ್ತಿದೆ.

ರಸ್ತೆ
ರಸ್ತೆ

By

Published : Dec 13, 2022, 6:39 AM IST

Updated : Dec 13, 2022, 4:36 PM IST

ಸಂಚಾರಿಗಳ ಆಕ್ರೋಶ

ಬೆಂಗಳೂರು: ರಾಜ್ಯ ರಾಜಧಾನಿಯ ಅಂಚಿನಲ್ಲಿರುವ ಆನೇಕಲ್‌ನಲ್ಲಿ ರಸ್ತೆ ಗುಂಡಿಗಳದ್ದೇ ಮಾತು. ಸ್ಥಳೀಯ ಜನಪ್ರತಿನಿಧಿಗಳು ಓಡಾಟ ನಡೆಸುತ್ತಿದ್ದರೂ ಸಹ ಹದಗೆಟ್ಟ ರಸ್ತೆ ಪರಿಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ.

ಮಾಜಿ ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿ ಶಾಸಕ ಬಿ ಶಿವಣ್ಣ ಬೇಡಿಕೆಯಂತೆ ಒಂದಷ್ಟು ಅನುದಾನವನ್ನು ರಸ್ತೆಗೆ ಬಿಡುಗಡೆ ಮಾಡಿದ್ದರು. ಇನ್ನೇನು ರಸ್ತೆ ಕಾಮಗಾರಿ ಕೈಗೆತ್ತಿಕೊಂಡು ಸಂಚಾರಿಗಳ ಸಂಕಟ ನೀಗುವ ಹಂತದಲ್ಲಿರುವಾಗಲೇ ರಾಜ್ಯ ಸರ್ಕಾರ ಬದಲಾಗಿ ಅನುದಾನ ಸ್ಥಗಿತಗೊಂಡಿತು. ಹೀಗಂತ ಆರೋಪಿಸುತ್ತಿರುವುದು ಲೋಕೋಪಯೋಗಿ ಇಲಾಖೆಯ ಹೆಸರೇಳದ ಅಧಿಕಾರಿ.

ರಸ್ತೆ ಗುಂಡಿ ತುಂಬಾ ಕೊಳಚೆ ನೀರು:ಇದೀಗ ಮಳೆಗಾಲದಲ್ಲಿ ಅತ್ತಿಬೆಲೆಯಿಂದ-ಬಳ್ಳೂರು ರಸ್ತೆಯ ಟಿವಿಎಸ್ ವೃತ್ತದಲ್ಲಿ ಕೂಗಳತೆಯವರೆಗೆ ರಸ್ತೆಯೋ ಹೊಂಡವೋ ಎಂಬುದು ಜನರಿಗೆ ತಿಳಿಯದಾಗಿದೆ. ಬೇಸಿಗೆ ಬಂದರೆ ಧೂಳಿನ ಸಮಸ್ಯೆ, ಮಳೆಗಾಲದಲ್ಲಿ ಕೆಸರಿನ ಚಿಂತೆ ಹೇಗಪ್ಪ ಇಲ್ಲಿ ಸಂಚಾರ ಎಂಬ ಚಿಂತೆ ಜನರದ್ದಾಗಿದೆ. ಈವರೆಗೆ ರಸ್ತೆ ದುರಸ್ತಿಗೆ ಒತ್ತಾಯಿಸಿ ಹೋರಾಟಗಳು ನಡೆದರೂ ಸಹ ಸರ್ಕಾರದ ಅಧಿಕಾರಿಗಳ ಕಿವಿ ಕಿವಿಗೆ ಕೇಳಿಸಿಲ್ಲ. ಪರಿಸ್ಥಿತಿಯೂ ಸುಧಾರಿಸಿಲ್ಲ.

ಈಗ ಸಣ್ಣ ಸಣ್ಣ ಕಾರುಗಳು, ದ್ವಿಚಕ್ರ ವಾಹನ, ಶಾಲಾ ವಾಹನಗಳು ಆಟೋಗಳು ನೀರಿನಲ್ಲಿ ಮುಗ್ಗುರಿಸುತ್ತಿರುವುದನ್ನು ನೋಡಿದರೆ ಚಾಲಕನ ಹೃದಯ ಕೈಗೆ ಬರುತ್ತಿದೆ. ಬೇಸಿಗೆಯಲ್ಲಂತೂ ಮುಂದೆ ಟಿಪ್ಪರ್ ಹೊರಟರೆ ಸಾಕು, ಧೂಳು ಕಣ್ಣು ತುಂಬಿ ಬೈಕ್ ಸವಾರರು ಎತ್ತ ಬೀಳುತ್ತಾರೋ ತಿಳಿಯುವುದಿಲ್ಲ.

ಮಳೆಗಾಲದಲ್ಲಿ ಹೊಸ ಪ್ರಯಾಣಿಕರು ಬಂದರೆ ಹಳ್ಳದ ಪ್ರಮಾಣ ಗೊತ್ತಿಲ್ಲದೆ ಹಳ್ಳದಲ್ಲಿಯೇ ಬೈಕಿನಲ್ಲಿ ಈಜಾಟ ಕಣ್ಣಿಗೆ ಕಟ್ಟುತ್ತದೆ. ಇವಿಷ್ಟು ಹಗಲಿನಲ್ಲಾದರೆ ಸರಿ. ದುಬಾರಿ ಟೋಲ್ ತಪ್ಪಿಸಿಕೊಳ್ಳಲು ತಮಿಳುನಾಡಿಗೆ ಹೊರಡುವ ವಾಹನಗಳು ಈ ರಸ್ತೆಯಲ್ಲಿ ಬಂದರೆ ಮುಗೀತು. ಮನೆಗೆ ಒಂದೋ ಗಾಯಗಳೊಂದಿಗೆ ಅಥವಾ ವಾಹನ ಮುರಿದುಕೊಂಡು ಹೋಗುವ ಪರಿಸ್ಥಿತಿಯಂತೂ ಕಟ್ಟಿಟ್ಟ ಬುತ್ತಿ.

ಭಾರಿ ವಾಹನಗಳ ಸಂಚಾರ ರಸ್ತೆ ಹದಗೆಡಲು ಕಾರಣ:ಟಿವಿಎಸ್ ಕಂಪನಿ ರಸ್ತೆಯಲ್ಲಿ 25 ಟನ್ ನಷ್ಟು ಭಾರ ಮಿತಿಯ ವಾಹನ ಸಂಚಾರಕ್ಕೆ ರಸ್ತೆ ಯೋಗ್ಯವಾಗಿದೆ. ಆದರೆ ತಮಿಳುನಾಡಿಂದ ಟೋಲ್ ಮತ್ತು ಸಂಚಾರ ಠಾಣೆಯನ್ನು ತಪ್ಪಿಸಿ ಹೊರಬರುವ ಭಾರಿ ಗಾತ್ರದ ಲಾರಿ, ಟಿಪ್ಪರ್​ಗಳು ಅಧಿಕವಾಗಿ ಇದೇ ರಸ್ತೆಯಲ್ಲಿ ಸಾಗುವುದರಿಂದ ರಸ್ತೆ ಹಾಳಾಗಿದೆ ಎಂದು ಅತ್ತಿಬೆಲೆ ಪೊಲೀಸರತ್ತ ಲೋಕೋಪಯೋಗಿ ಇಲಾಖೆ ದೂರುತ್ತಿದೆ.

ನೆನೆಗುದಿಗೆ ಬಿದ್ದ ಮೇಲ್ಸೇತುವೆ ಕಂಬಗಳು:ಅಗಲವಾದ ರಸ್ತೆಯಾದರೂ ಇದ್ದರೆ ಆ ಕಡೆಯೋ ಈ ಕಡೆಯೋ ಸಣ್ಣ ಪುಟ್ಟ ವಾಹನಗಳು, ಬೈಕ್ ಸವಾರರು ನುಸುಳಿಕೊಂಡು ಓಡಾಟ ನಡೆಸುತ್ತಿದ್ದವು. ಆದರೆ ಇದೀಗ ಆಮೆಗತಿಯಲ್ಲಿ ಸಾಗುತ್ತಿರುವ ಮೇಲ್ಸೇತುವೆ ಕಂಬ-ಕಮಾನುಗಳು ರಸ್ತೆಯನ್ನು ಇಬ್ಭಾಗ ಮಾಡಿ ದೊಡ್ಡ-ದೊಡ್ಡ ಕಾಂಕ್ರಿಟ್ ದಿಮ್ಮಿಗಳನ್ನು ರಸ್ತೆಯಲ್ಲಿ ಬಿಟ್ಟಿವೆ. ಹೀಗಾಗಿ ಈ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ.

ಭೂಮಿ ಒತ್ತುವರಿ ತೆರವು ತೊಡಕು:ಅಧಿಕಾರಿಗಳನ್ನು ಸಂಪರ್ಕಿಸಿದಾಗ, 'ನಾವು ಮೇಲಾಧಿಕಾರಿಗಳನ್ನು ಸಂಪರ್ಕಿಸುತ್ತಿದ್ದು, ಇನ್ನೂ ಸರ್ಕಾರದ ಹಂತದಲ್ಲಿ ಪ್ರಸ್ತಾಪವಿದೆ. ಇಷ್ಟರಲ್ಲೇ ಅನುದಾನ ಬಿಡುಗಡೆಗೊಳ್ಳಲಿದೆ' ಎಂದು ಸಿದ್ಧ ಉತ್ತರ ನೀಡುತ್ತಾರೆ. ಅತ್ತಿಬೆಲೆ ಲಾರಿ-ಟಿಪ್ಪರ್ ಅಸೋಷಿಯೇಷನ್ ಆಗೊಮ್ಮೆ ಈಗೊಮ್ಮ ಜಲ್ಲಿ- ಎಂ ಸ್ಯಾಂಡ್​ ಸುರಿದು ಕೈಚೆಲ್ಲಿ ಕುಳಿತಿದೆ.

ಟಿವಿಎಸ್ ಬೃಹತ್ ಕೈಗಾರಿಕೆಗೆ ಮನವಿ ಸಲ್ಲಿಸಿದ ಲೋಕೋಪಯೋಗಿ ಅಧಿಕಾರಿಗಳು. ರಸ್ತೆ ಕಾಮಗಾರಿಗೆ ಅನುದಾನಕ್ಕಾಗಿ ಅಲೆದರೂ ಅಧಿಕಾರಿಗಳ ದುಬಾರಿ ಮೊತ್ತಕ್ಕೆ ಟಿವಿಎಸ್ ಕಂಪನಿ ಒಪ್ಪದೆ ರಸ್ತೆ- ಗುಂಡಿಮಯವಾಗಿಯೇ ಉಳಿದಿದೆ. ಇನ್ನು ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ, ರಾಜಕಾರಣಿಗಳು ಪಕ್ಷಗಳ ಮೇಲೆ, ಸಾರ್ವಜನಿಕರು ಪೊಲೀಸರ ಮೇಲೆ ಹೀಗೆ ಕೆಸರೆರಚಾಟ ಬಿಟ್ಟರೆ ರಸ್ತೆ ಸರಿಹೋಗಲು ಪರಿಹಾರಗಳೇ ಇಲ್ಲವಾ ಎಂಬ ಚಿಂತೆ ಜನರನ್ನು ಕಾಡುತ್ತಿದೆ.

ಇನ್ನಾದರೂ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ಪ್ರಯಾಣಿಕರಿಗೆ ಸುಲಭ ಸಂಚಾರಕ್ಕೆ ಅನುಕೂಲವಾಗಲು ಈ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ.

ಓದಿ:ಬೆಂಗಳೂರಿನಲ್ಲಿ 32,011 ರಸ್ತೆ ಗುಂಡಿಗಳು ಪತ್ತೆ: ಶೇ. 92.21ರಷ್ಟು ದುರಸ್ತಿ

Last Updated : Dec 13, 2022, 4:36 PM IST

ABOUT THE AUTHOR

...view details