ಬೆಂಗಳೂರು:ವಿವಿಧ ಅಪರಾಧಗಳಲ್ಲಿ ಭಾಗಿಯಾಗಿ ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೌಡಿಶೀಟರ್ಗಳ ನಡುವೆ ಮಾರಾಮಾರಿ ನಡೆದಿದೆ ಎಂದು ತಿಳಿದುಬಂದಿದೆ.
ಕುಖ್ಯಾತ ರೌಡಿಶೀಟರ್ ಬಾಂಬೆ ಸಲೀಂ ತಮ್ಮನಿಂದ ರೋಹಿತ್ ಗೌಡ ಎಂಬುವನ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಸಲೀಂ ಸಹೋದರನನ್ನು ಇಂದು ನ್ಯಾಯಾಲಯಕ್ಕೆ ಕರೆದೊಯ್ಯಲು ಜೈಲು ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಪಕ್ಕದ ಬ್ಯಾರಕ್ ನಲ್ಲಿದ್ದ ರೋಹಿತ್ ಗೌಡ ಎಂಬಾತ ಗುರಾಯಿಸಿದ ಎಂಬ ಕಾರಣಕ್ಕೆ ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಸಿಬ್ಬಂದಿ ಜೊತೆಯಲ್ಲೇ ರೌಡಿಗಳು ತಳ್ಳಾಡಿ ಬಡಿದಾಡಿಕೊಂಡಿದ್ದಾರೆ.
ಕೊಲೆ ಕೇಸ್ ಆರೋಪದಡಿ ಬಾಂಬೆ ಸಲೀಂ ಹಾಗೂ ಸಹೋದರ ಸೇರಿದಂತೆ ಆರು ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಸದ್ಯ ಪರಪ್ಪನ ಅಗ್ರಹಾರ ಠಾಣೆಯಲ್ಲಿ ರೌಡಿ ಶೀಟರ್ ಬಾಂಬೆ ಸಲೀಂ ತಮ್ಮನ ಮೇಲೆ ಪ್ರಕರಣ ದಾಖಲಿಸಲಾಗಿದೆ.