ಬೆಂಗಳೂರು : ಮೈಸೂರು, ಕಲಬುರಗಿ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಲಬುರಗಿಯಲ್ಲಿ ತಮ್ಮ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಒಂದೂವರೆ ಸಾವಿರ ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಂಗಡಿ ಮಾಲೀಕರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಿ ಜಿಲ್ಲಾಧಿಕಾರಿಗಳ ತನಿಖೆಗೆ ಆದೇಶಿಸಲಾಗಿದೆ ಎಂದರು.
ಇದು ನಮ್ಮ ಸರ್ಕಾರದ ಅಕ್ಕಿನಾ ಅಥವಾ ಬೇರೆ ರಾಜ್ಯದ ಅಕ್ಕಿನಾ? ಎಂದು ತನಿಖೆ ನಡೆಸಿ ವರದಿ ನೀಡಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ತಪ್ಪಿತಸ್ಥರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹಾಕುತ್ತೇವೆ. ಎಷ್ಟೇ ಪ್ರಭಾವಿಯಾಗಿದ್ದರೂ ಅವರನ್ನು ಕ್ಷಮಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಕಲಬುರಗಿಯಲ್ಲಿ 1,500 ಚೀಲ ಅಕ್ಕಿ, 135 ಚೀಲ ತೊಗರಿ ಕಾಳು ವಶಪಡಿಸಿಕೊಳ್ಳಲಾಗಿದೆ. ಮೈಸೂರಿನಲ್ಲಿ 697 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಆ ಅಕ್ಕಿ ಎಂಡಿಸಿಸಿ ಸಗಟು ಕೇಂದ್ರಕ್ಕೆ ಸಂಬಂಧಪಟ್ಟಿದ್ದಾಗಿದ್ದು, ದಾವಣಗೆರೆಯಲ್ಲಿ 400 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದ್ದು, ಇದು ಯಾರಿಗೆ ಸಂಬಂಧಪಟ್ಟಿದ್ದು ಎಂಬುದು ಇನ್ನು ದೃಢಪಟ್ಟಿಲ್ಲ. ಮೂರು ಕಡೆ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರದ ನಾನಾ ಯೋಜನೆ ಅಡಿ ಸಹಾಯಧನದಲ್ಲಿ ನೀಡುತ್ತಿರುವ ಪಡಿತರವನ್ನು 10-12 ರೂ. ನಂತೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಉಚಿತವಾಗಿ ನೀಡುವಂತಹ ಅಕ್ಕಿಯನ್ನು ಸರ್ಕಾರ 25 ರೂ. ಕೊಟ್ಟು ಖರೀದಿಸುತ್ತದೆ. ಆ ಅಕ್ಕಿ ಪಡೆಯುವಂತಹ ಪಡಿತರ ಚೀಟಿದಾರರು 10-12 ರೂ.ಗೆ ಮಾರಾಟ ಮಾಡುತ್ತಿರುವುದನ್ನು ತಡೆಯಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ತಡೆಯಲು ಸೂಕ್ತ ಕಾನೂನು ತರಲಾಗುವುದು ಎಂದರು.
ನಾವು ಬಡವರಿಗೆ ಕೋಟ್ಯಂತರ ರೂ. ಹಣ ಖರ್ಚು ಮಾಡಿ ಪಡಿತರ ಒದಗಿಸುತ್ತಿದ್ದೇವೆ. ಇದನ್ನು ದುರ್ಬಳಕೆ ಮಾಡಿಕೊಳ್ಳುವುದು ತಪ್ಪು. ಇದಕ್ಕೆ ಸಂಬಂಧಿಸಿ ಕಾನೂನು ತರಲು ಅಧಿಕಾರಿಗಳು ಮತ್ತು ಸಿಎಂ ಜತೆ ಮಾತನಾಡುತ್ತೇನೆ ಎಂದು ಹೇಳಿದರು. ನಿಮಗೆ ಪಡಿತರ ಹೆಚ್ಚಾದರೆ ಅದನ್ನು ಅಂಗಡಿಯಲ್ಲೇ ಬಿಡಿ. ಬಡವರಿಗೆ ಅನುಕೂಲ ಆಗುತ್ತದೆ. ಅದನ್ನು ಬಿಟ್ಟು ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ಇಂಥವರ ಪಡಿತರ ರದ್ದು ಮಾಡಲೂ ಸಹ ಕಾನೂನಿನಲ್ಲಿ ತರಲು ಚಿಂತನೆ ಮಾಡಲಾಗುತ್ತಿದೆ ಎಂದರು. ಮೇಲ್ನೋಟಕ್ಕೆ ಪಡಿತರ ದುರ್ಬಳಕೆ ಮಾಡಿಕೊಂಡಿರುವ 499 ಅಂಗಡಿಗೆ ನೋಟಿಸ್ ನೀಡಿದ್ದೇವೆ. 33 ಲೈಸೆನ್ಸ್ ರದ್ದು ಮಾಡಿದ್ದೇವೆ ಎಂದು ತಿಳಿಸಿದರು.