ಬೆಂಗಳೂರು:ಭಾರತ ಲಾಕ್ ಡೌನ್ ಪರಿಣಾಮದಿಂದ ಆಹಾರಕ್ಕಾಗಿ ಪರದಾಡುತ್ತಿರುವ ಪಿಜಿ, ಹಾಸ್ಟೆಲ್ಗಳಲ್ಲಿರುವ ವಿದ್ಯಾರ್ಥಿಗಳು ಹಾಗು ಉದ್ಯೋಗಿಗಳ ನೆರವಿಗೆ ಆರೋಗ್ಯ ಇಲಾಖೆ ಧಾವಿಸಿದೆ. ಲಾಕ್ ಡೌನ್ ಆದ ಒಂದು ವಾರದ ನಂತರ ನೆರವಿನ ಹಸ್ತ ಚಾಚಿದ್ದು ಜಿಲ್ಲಾಡಳಿತದ ಮೂಲಕ ಊಟೋಪಚಾರದ ವ್ಯವಸ್ಥೆ ಮಾಡುತ್ತಿದೆ.
ರಾಜ್ಯ ರಾಜಧಾನಿ ಬೆಂಗಳೂರಿಗೆ ವ್ಯಾಸಂಗಕ್ಕೆ ಬರುವವರು, ಉದ್ಯೋಗ ಅರಸಿ ಬರುವವರು ಹಾಸ್ಟೆಲ್ ಹಾಗೂ ಪಿಜಿಗಳನ್ನೇ ಅವಲಂಬಿಸುತ್ತಾರೆ. ಹಾಗಾಗಿಯೇ ಮಹಾನಗರದಲ್ಲಿ ಹಲವಾರು ಪಿಜಿಗಳು ಹುಟ್ಟಿಕೊಂಡಿವೆ. ಕೋರಂಮಗಲ, ಹಲಸೂರು, ಎಲೆಕ್ಟ್ರಾನಿಕ್ ಸಿಟಿ, ಮಲ್ಲೇಶ್ವರಂ ಸೇರಿದಂತೆ ನಗರದ ಎಲ್ಲಾ ಭಾಗದಲ್ಲಿಯೂ ಲೆಕ್ಕವಿಲ್ಲದಷ್ಟು ಪ್ರಮಾಣದ ಪಿಜಿಗಳು ತಲೆ ಎತ್ತಿವೆ.
ಯುಗಾದಿ ಹಬ್ಬ ಎನ್ನುವ ಕಾರಣಕ್ಕೆ ಅಲ್ಲಿರುವ ಕೆಲವರು ತಮ್ಮ ತಮ್ಮ ಊರಿಗೆ ಹೋಗಿದ್ದಾರೆ. ಆದರೆ ಬಹಳಷ್ಟು ಮಂದಿ ಇನ್ನೂ ಹಾಸ್ಟೆಲ್ ಹಾಗು ಪಿಜಿಗಳಲ್ಲೇ ಇದ್ದಾರೆ. ಪಿಜಿಯಲ್ಲಿ ಎರಡು ಬಗೆಯ ಆಯ್ಕೆ ಇದೆ, ವಿತ್ ಮೀಲ್ಸ್ ಹಾಗೂ ವಿತೌಟ್ ಮೀಲ್ಸ್. ಪಿಜಿಗಳಲ್ಲಿ ಊಟ ರುಚಿ ಇರುವುದಿಲ್ಲ ಎನ್ನುವ ಕಾರಣಕ್ಕೆ ಬಹುತೇಕರು ತಮ್ಮ ಕಚೇರಿ ಹಾಗು ಹೋಟೆಲ್ಗಳನ್ನೇ ಊಟ, ತಿಂಡಿಗಾಗಿ ಅವಲಂಬಿಸಿದ್ದಾರೆ.
ಈಗ ಲಾಕ್ ಡೌನ್ ಪರಿಣಾಮ ನಗರದ ಎಲ್ಲಾ ಹೋಟೆಲ್, ಕ್ಯಾಂಟೀನ್ ಗಳು ಮುಚ್ಚಿವೆ. ಪಾರ್ಸೆಲ್ ಕೊಡಬಹುದು ಎನ್ನುವ ನಿಯಮ ಇದ್ದರೂ ಹೋಟೆಲ್ಗಳೂ ಕ್ಲೋಸ್ ಆಗಿವೆ. ಇದರಿಂದಾಗಿ ಹೋಟೆಲ್ ಊಟವನ್ನೇ ನಂಬಿರುವ ಪಿಜಿ ವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷವಾಗಿ ಪಿಜಿಗಳಲ್ಲಿರುವ ಮಹಿಳಾ ಉದ್ಯೋಗಿಗಳಿಗೆ ಹೆಚ್ಚಿನ ಸಮಸ್ಯೆ ಎದುರಾಗುತ್ತಿದೆ. ಊಟಕ್ಕಾಗಿ ಪ್ರಯಾಸಪಡಬೇಕಾಗಿದೆ. ಪಿಜಿಗಳಲ್ಲೇ ಇತರರೊಂದಿಗೆ ಹಂಚಿಕೊಂಡು ತಿನ್ನವ ಸ್ಥಿತಿಗೆ ಸಿಲುಕಿದ್ದಾರೆ.