ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಪ್ರಕ್ರಿಯೆ ವಿಳಂಬವಾಗುತ್ತದೆ ಎಂದು ಸ್ಫೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ. ಇದರಿಂದ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಸದ್ಯಕ್ಕೆ ಸೇಫ್ ಆಗಿದೆ.
ಆಡಳಿತ ಪಕ್ಷದ ಬಂಡಾಯ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಇಂದು ಅಂಗೀಕರಿಸಿದ್ದರೆ ದೋಸ್ತಿ ಸರ್ಕಾರದ ಸಂಖ್ಯಾಬಲ ಕುಸಿದು ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಇಂದು ಶಾಸಕರ ರಾಜೀನಾಮೆ ಅಂಗೀಕಾರ ಮುಂದೂಡಲಾಗಿದ್ದು, ರಾಜಕೀಯ ಅತಂತ್ರ ಪರಿಸ್ಥಿತಿ ಮುಂದುವರೆದಿದೆ.
ಶಾಸಕರ ರಾಜೀನಾಮೆ ಅಂಗೀಕಾರ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಾವಕಾಶದ ಅವಶ್ಯಕತೆ ಇದೆ ಎನ್ನುವ ಸಂದೇಶವನ್ನು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ನೀಡಿದ್ದಾರೆ. ಇದರಿಂದ ಸರ್ಕಾರ ಒಂದೆರಡು ದಿನಗಳಲ್ಲಿ ಪತನಗೊಳ್ಳಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಲಿದ್ದಾರೆ ಎಂಬ ಬಿಜೆಪಿಯ ಕನಸು ಭಗ್ನವಾದಂತಾಗಿದೆ.
ರಾಜೀನಾಮೆ ನೀಡಿರುವ ಶಾಸಕರಲ್ಲಿ ಐದು ಜನರ ರಾಜೀನಾಮೆ ಪತ್ರ ಕ್ರಮಬದ್ಧವಾಗಿವೆ. 8 ಜನ ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ. ಶಾಸಕರ ರಾಜೀನಾಮೆ ಬಗ್ಗೆ ಸಾರ್ವಜನಿಕರ ದೂರು, ಕಾಂಗ್ರೆಸ್ ಪಕ್ಷದ ಮುಖಂಡರ ದೂರು, ಅನರ್ಹತೆ ದೂರುಗಳ ಬಗ್ಗೆ ವಿಚಾರಣೆ ನಡೆಸಿ ಶಾಸಕರ ಅಭಿಪ್ರಾಯವನ್ನೂ ಪಡೆದು ರಾಜೀನಾಮೆ ಅಂಗೀಕಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪೀಕರ್ ಹೇಳಿರುವುದರಿಂದ ಸದ್ಯಕ್ಕೆ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲದಂತಾಗಿದೆ.
ಇದರಿಂದ ದೋಸ್ತಿ ಪಕ್ಷಗಳ ನಾಯಕರಿಗೆ ಅತೃಪ್ತರ ಮನವೊಲಿಕೆಗೆ ಸಾಕಷ್ಟು ಕಾಲಾವಕಾಶ ಸಿಕ್ಕಂತಾಗಿದೆ. ಮುಂಬೈನಲ್ಲಿ ತಂಗಿರುವ ಅತೃಪ್ತ ಶಾಸಕರು ಬೆಂಗಳೂರಿಗೆ ಆಗಮಿಸಿ ವಿಧಾನಸಭೆ ಅಧ್ಯಕ್ಷರನ್ನು ಭೇಟಿ ಮಾಡುವಾಗ ಮೈತ್ರಿ ನಾಯಕರಿಗೆ, ಅತೃಪ್ತ ಶಾಸಕರ ಮನವೊಲಿಕೆಗೆ ಹೆಚ್ಚಿನ ಅವಕಾಶ ಸಿಕ್ಕಂತಾಗುತ್ತದೆ.
ಈ ತಿಂಗಳ 12ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದೊಳಗೆ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಬಹುದೆಂದು ಬಿಜೆಪಿ ಅಂದಾಜಿಸಿತ್ತು. ಆದರೆ ಸ್ಪೀಕರ್ ತೀರ್ಮಾನದಿಂದ ಬಹಳ ಹುಮ್ಮಸ್ಸಿನಿಂದ ಇದ್ದ ಭಾರತೀಯ ಜನತಾ ಪಕ್ಷಕ್ಕೆ ಭ್ರಮನಿರಸನವಾಗಿದೆ.