ಬೆಂಗಳೂರು :ಹಲವು ಜಾತಿ, ಸಮುದಾಯಗಳು ವಿವಿಧ ಮೀಸಲಾತಿಯನ್ನು ಕೋರಿ ನಡೆಸುತ್ತಿರುವ ಹೋರಾಟ ರಾಜ್ಯ ಸರ್ಕಾರದ ಪಾಲಿಗೆ ಸಂಕಷ್ಟ ತಂದೊಡ್ಡಿದೆ.
ಇದೀಗ ಕೇಂದ್ರ ಸರ್ಕಾರ ಕೂಡ ಯಾವುದೇ ಜಾತಿಗೆ ಮೀಸಲಾತಿ ಒದಗಿಸುವ ಸಂಬಂಧ ತನಗೆ ಶಿಫಾರಸು ಮಾಡಬಾರದು ಎಂದಿದೆ. ಹೀಗೆ ಮಾಡುವ ಮೂಲಕ ಸಮಸ್ಯೆಯನ್ನು ಕೇಂದ್ರದ ಅಂಗಳಕ್ಕೆ ತಂದು ನೀವು ಮುಜುಗರದಿಂದ ಪಾರಾಗಬಹುದು. ಆದರೆ, ಮುಂದೆ ನಾವು ಈ ಮುಜುಗರವನ್ನು ಅನುಭವಿಸಬೇಕಾಗುತ್ತದೆ. ಈಗ ನಮ್ಮ ಮುಂದಿರುವ ಸಮಸ್ಯೆಗಳೇ ಬೆಟ್ಟದಷ್ಟಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಮೀಸಲಾತಿ ಪಡೆಯಲು ವಿವಿಧ ಜಾತಿ, ಸಮುದಾಯಗಳು ನಡೆಸುತ್ತಿರುವ ಹೋರಾಟವನ್ನು ಗಂಭೀರವಾಗಿ ಗಮನಿಸುತ್ತಿರುವ ಕೇಂದ್ರ ಸರ್ಕಾರ, ಈ ವಿಷಯದಲ್ಲಿ ತನಗೆ ಮುಜುಗರವಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೂಚಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಸಂಬಂಧ ಕಳೆದ ವಾರ ಮುಖ್ಯಮಂತ್ರಿಗಳ ಜತೆ ಮಾತನಾಡಿರುವ ವರಿಷ್ಠರು, ಯಾವುದೇ ಬಗೆಯ ಶಿಫಾರಸುಗಳನ್ನು ಮಾಡುವಾಗ ಎಚ್ಚರವಹಿಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ವರಿಷ್ಠರ ಈ ಸೂಚನೆ ಮುಖ್ಯಮಂತ್ರಿಗಳಿಗೆ ತಲೆನೋವಾಗಿದೆ.
ತಮ್ಮನ್ನು ಹಿಂದುಳಿದ ಪ್ರವರ್ಗ 2ಎ ಗೆ ಸೇರಿಸಬೇಕು ಎಂದು ಒತ್ತಾಯಿಸಿ ಪಂಚಮಸಾಲಿಗಳು ಸೇರಿದಂತೆ ವಿವಿಧ ಜಾತಿ, ಸಮುದಾಯಗಳು ಹೋರಾಟ ಆರಂಭಿಸಿವೆ. ಈ ಮಧ್ಯೆ ವೀರಶೈವ-ಲಿಂಗಾಯತ ಒಳಪಂಗಡಗಳಿಗೆ ಮೀಸಲಾತಿ ಕೋರಿ ಬೇಡಿಕೆ ಸಲ್ಲಿಸಲಾಗಿದೆ. ಕುರುಬ ಸಮುದಾಯ ಎಸ್ಟಿ ಪಟ್ಟಿಗೆ ಸೇರಿಸಲು ಒತ್ತಾಯಿಸಿ ಬೃಹತ್ ಸಭೆ ನಡೆಸಿದೆ.
ಇದೇ ರೀತಿ ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ ಶೇ.7.5ಕ್ಕೇರಿಸುವಂತೆ ಬೇಡಿಕೆ ಕೇಳಿ ಬಂದಿದೆ. ಈ ಮಧ್ಯೆ ದಲಿತ ವರ್ಗದ ಎಡಗೈ ಸಮುದಾಯ ತನಗೆ ಒಳಮೀಸಲಾತಿ ನೀಡಬೇಕು ಎಂದು ಹೋರಾಟ ನಡೆಸುತ್ತಿದೆ. ಹೀಗಿರುವಾಗ ಶಿಫಾರಸಿನ ಸಮಸ್ಯೆಯನ್ನು ನಮ್ಮ ಬಳಿ ತರಬೇಡಿ ಎಂಬ ಕೇಂದ್ರ ಸರ್ಕಾರದ ಹೇಳಿಕೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.