ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಮಳೆ ಅವಾಂತರ: ಹಲವೆಡೆ ರೆಡ್ ಅಲರ್ಟ್ ಘೋಷಣೆ - Red Alert Declaration

ರಾಜ್ಯದಲ್ಲಿ ಮಳೆಯಾರ್ಭಟ ಜೋರಾಗಿದೆ. ಪರಿಣಾಮ, ಹಲವೆಡೆ ಪ್ರವಾಹ ಭೀತಿ ತಂದೊಡ್ಡಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆಯಿದ್ದು, ರೆಡ್​ ಅಲರ್ಟ್​ ಘೋಷಿಸಲಾಗಿದೆ.

Red alert Declared for part of state for  Heavy rain fall
ರಾಜ್ಯದಲ್ಲಿ ಮಳೆ ಅವಾಂತರ: ಹಲವೆಡೆ ರೆಡ್ ಅಲರ್ಟ್ ಘೋಷಣೆ

By

Published : Aug 5, 2020, 7:13 PM IST

ಬೆಂಗಳೂರು:ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಕರಾವಳಿಯಲ್ಲಿ ಮಾನ್ಸೂನ್ ಚುರುಕಾಗಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿಯೂ ಮುಂದಿನ ದಿನಗಳಲ್ಲಿ ಜೋರು ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ.

ಈ ನಿಟ್ಟಿನಲ್ಲಿ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡಿನ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ವಿಭಾಗದ ತಜ್ಞ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ 31 ಸೆಂ.ಮೀ ದಾಖಲೆಯ ಮಳೆಯಾಗಿದೆ. ಮಡಿಕೇರಿಯಲ್ಲಿ 23 ಸೆಂ.ಮೀ, ಭಾಗಮಂಡಲ 19 ಸೆಂ.ಮೀ, ಕನ್ನಂಬಾಡಿ 17 ಸೆಂ.ಮೀ ಹಾಗು ಬೆಳಗಾವಿ 7 ಸೆಂ.ಮೀ ಮಳೆಯಾಗಿದೆ.

ರಾಜ್ಯದಲ್ಲಿ ಮಳೆ ಅವಾಂತರ: ಹಲವೆಡೆ ರೆಡ್ ಅಲರ್ಟ್ ಘೋಷಣೆ

ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 5 ರಿಂದ 9ರ ವರೆಗೆ ವ್ಯಾಪಕ ಮಳೆಯಾಗಲಿದೆ. ಉತ್ತರ ಕನ್ನಡ, ಉಡುಪಿ, ದ.ಕನ್ನಡ ಜಿಲ್ಲೆಗಳಿಗೆ ಆಗಸ್ಟ್ 5,8 ಹಾಗೂ 9ರಂದು ಕೆಲವು ಕಡೆ ಭಾರಿ ಮಳೆಯಾಗಲಿದ್ದು, 20 ಸೆಂ.ಮೀ.ಗಿಂತ ಹೆಚ್ಚಿನ ಮಳೆಯಾಗಲಿರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.

ಆಗಸ್ಟ್ 6,7ರಂದು ಮಳೆ ಮುಂದುವರಿಯುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ ಕರಾವಳಿ ಪ್ರದೇಶಗಳಲ್ಲಿ ಗಾಳಿಯ ವೇಗ ಹೆಚ್ಚಿರುವುದರಿಂದ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಉತ್ತರ ಒಳನಾಡಿನಲ್ಲಿ ಆಗಸ್ಟ್ 5ರಂದು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಆಗಸ್ಟ್ 6 ಹಾಗೂ 9ರಂದು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ. 7 ಹಾಗೂ 8ರಂದು ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದಿದ್ದಾರೆ.

ಆಗಸ್ಟ್ 5ರಂದು ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷಿಸಿರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಆಗಸ್ಟ್ 6 ಹಾಗೂ 9 ರಂದು ಮಳೆಯಾಗುವ ಸಾಧ್ಯತೆ ಇರುವುದರಿಂದ ಯಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಆಗಸ್ಟ್ 5 ರಿಂದ 9ರ ವರೆಗೆ ವ್ಯಾಪಕ ಮಳೆಯಾಗಲಿದೆ.

ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಲೆನಾಡಿನ ಜಿಲ್ಲೆಗಳಲ್ಲಿ ಆಗಸ್ಟ್ 6 ಹಾಗೂ 9ರ ವರೆಗೆ ಮಳೆ ಮುಂದುವರಿಯುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 3 ಹಾಗೂ 8ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿಗೆ ಯಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details