ಬೆಂಗಳೂರು : ರಾಜ್ಯದಲ್ಲಿ ಕಡ್ಡಾಯ ಗ್ರಾಮೀಣ ಸೇವೆಯಡಿಯಲ್ಲಿ 4 ಸಾವಿರ ವೈದ್ಯರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ತಾಲೂಕು ಆಸ್ಪತ್ರೆಗಳಲ್ಲಿ ಕೊರತೆಯಿರುವ ತಜ್ಞ ವೈದ್ಯರನ್ನು ನೇಮಕ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ ಕೆ ಸುಧಾಕರ್ ವಿಧಾನಸಭೆಯಲ್ಲಿ ತಿಳಿಸಿದರು.
4 ಸಾವಿರ ವೈದ್ಯರ ನೇಮಕಾತಿ :ಇಂದು ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಯು. ರಾಜೇಶ್ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೇಮಕಗೊಂಡ ವೈದ್ಯರನ್ನು ಕೌನ್ಸಿಲಿಂಗ್ ಮೂಲಕ ಸ್ಥಳ ನಿಯೋಜನೆ ಮಾಡಲಾಗುತ್ತದೆ. ಕೊರತೆಯಿರುವ ತಾಲೂಕು ಆಸ್ಪತ್ರೆಗಳಿಗೆ ತಜ್ಞ ವೈದ್ಯರನ್ನು ನಿಯೋಜಿಸಲಾಗುವುದು ಎಂದರು. ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರ ಹುದ್ದೆ ಖಾಲಿಯಿದ್ದು, ಅನ್ಯತಾ ಸೇವೆ ಮೇಲೆ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಇಲಾಖೆಯಲ್ಲಿ ಖಾಲಿ ಇರುವ 400 ಫಾರ್ಮಾಸಿಸ್ಟ್, 150 ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರು, 8 ಕ್ಷ-ಕಿರಣ ತಂತ್ರಜ್ಞರ ಹುದ್ದೆಗಳನ್ನು ಭರ್ತಿ ಮಾಡಲು ಸೆ.7ರಂದು ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೇಳಿದರು.
ಚನ್ನರಾಯಪಟ್ಟಣದಲ್ಲಿ ತಾಯಿ ಮಗು ಆಸ್ಪತ್ರೆ: ಚನ್ನರಾಯಪಟ್ಟಣ ತಾಲೂಕಿನಲ್ಲಿ ತಾಯಿ-ಮಗು ಆಸ್ಪತ್ರೆ ಆರಂಭಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಅವಕಾಶವಿಲ್ಲ. ರಾಜ್ಯ ಸರ್ಕಾರದ ಅನುದಾನದಿಂದ ತಾಯಿ-ಮಗು ಆಸ್ಪತ್ರೆ ನಿರ್ಮಾಣದ ಬಗ್ಗೆ ಆ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅವರ ಪ್ರಶ್ನೆಗೆ ಉತ್ತರಿಸಿದರು. ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲನೆ ಆಗದಿದ್ದರೆ ಅನುದಾನ ದೊರೆಯುವುದಿಲ್ಲ. ಚನ್ನರಾಯಪಟ್ಟಣ ತಾಲೂಕಿನಲ್ಲಿ 30 ಹಾಸಿಗೆಗಳ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಕಾಮಗಾರಿಯ 13 ಕೋಟಿ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆಗಾಗಿ ಸ್ವೀಕೃತವಾಗಿದೆ ಎಂದು ಹೇಳಿದರು.
ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ :ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಬಿಗ್ಗೆವಾಡಿ ಹಾಗೂ ಬೆಡವಾಡ ಗ್ರಾಮಗಳಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಐಹೊಳೆ ಡಿ.ಮಹಲಿಗಪ್ಪ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ರಾಯಭಾಗ ತಾಲೂಕು ಆಸ್ಪತ್ರೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.
100 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿ: ರಾಜ್ಯದಲ್ಲಿ ಈ ವರ್ಷ 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಸಚಿವ ಡಾ ಕೆ ಸುಧಾಕರ್ ತಿಳಿಸಿದರು. ವಿಧಾನಸಭೆಯ ಪ್ರಶ್ನೋತ್ತರ ವೇಳೆ ಬಿಜೆಪಿಯ ಭರತ್ ಶೆಟ್ಟಿಯವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಪ್ರಸ್ತುತ 800 ಆರೋಗ್ಯ ಕೇಂದ್ರಗಳು ಇವೆ. ಹೊಸದಾಗಿ ಪಿಎಚ್‌ಸಿಗಳನ್ನು ಮಂಜೂರು ಮಾಡಲು ಆರ್ಥಿಕ ಇಲಾಖೆ ಒಪ್ಪುತ್ತಿಲ್ಲ. ಈ ಹಿಂದೆ ಪಿಎಚ್‌ಸಿಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಪ್ರಾದೇಶಿಕ ಅಸಮತೋಲನವಾಗಿದೆ. ಅದರಂತೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಿಎಚ್‌ಸಿಗಳ ಅವಶ್ಯಕತೆ ಹೆಚ್ಚಿದೆ. ಈ ಭಾಗದಲ್ಲಿ 107 ಪಿಎಚ್‌ಸಿಗಳ ಕೊರತೆ ಇದೆ ಎಂದರು.
ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 100 ಪಿಎಚ್‌ಸಿಗಳನ್ನು ಮೇಲ್ದರ್ಜೆಗೇರಿಸುವ ಘೋಷಣೆ ಮಾಡಿದ್ದಾರೆ. ಅದರಂತೆ 100 ಪಿಎಚ್‌ಸಿಗಳನ್ನು ಈ ವರ್ಷ ಮೇಲ್ದರ್ಜೆಗೇರಿಸಲಾಗುವುದು ಎಂದರು.