ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಾಟಕ ಪ್ರದರ್ಶಿಸಿದ್ದ ಬೀದರ್‌ನ ಶಾಹಿನ್ ಶಿಕ್ಷಣ ಸಂಸ್ಥೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸಮವಸ್ತ್ರ ಹಾಗೂ ಶಸ್ತ್ರಾಸ್ತ್ರ ಸಹಿತ ಅಲ್ಲಿಗೆ ತೆರಳಿ ಮಕ್ಕಳನ್ನು ವಿಚಾರಣೆ ನಡೆಸಿದ್ದ ಕ್ರಮದ ಕುರಿತು ಇಲಾಖಾ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಶಿಫಾರಸು ಮಾಡಿದ್ದಾರೆ.
ಈ ಕುರಿತು ವಕೀಲೆ ನಯನ ಜ್ಯೋತಿ ಝಾವರ್ ಹಾಗೂ ಮಾನವ ಹಕ್ಕುಗಳ ಸಂಘಟನೆ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹಂಗಾಮಿ ಸಿಜೆ ಸತೀಶ್ ಚಂದ್ರಶರ್ಮ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ವಾದಿಸಿ, ಪ್ರಕರಣದಲ್ಲಿ ಬಾಲ ನ್ಯಾಯ ಕಾಯ್ದೆ ನಿಯಮ ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ಸಿಬ್ಬಂದಿ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸುವಂತೆ ಬೀದರ್ ಪೊಲೀಸ್ ವರಿಷ್ಠಾಧಿಕಾರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಶಿಫಾರಸು ಮಾಡಿದ್ದಾರೆ ಎಂದು ತಿಳಿಸಿದರು.
ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್, ನ್ಯಾಯಾಲಯ ಈ ಹಿಂದೆ ಘಟನೆ ಬಗ್ಗೆ ತನಿಖೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಾಲ ನ್ಯಾಯ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಕುರಿತು ಡಿಜಿಪಿ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಆದೇಶಿಸಿತ್ತು. ಅದನ್ನು ಪಾಲಿಸಿಲ್ಲ ಎಂದರು. ಇದಕ್ಕೆ ಸರ್ಕಾರಿ ವಕೀಲರು ಉತ್ತರಿಸಿ, ಎರಡನೇ ಆದೇಶವನ್ನು ಸಹ ಪಾಲನೆ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದರು.