ಬೆಂಗಳೂರು : ಬ್ಯಾಲೆಟ್ ಪೇಪರ್‌ನಲ್ಲಿ ತಪ್ಪು ಮಾಹಿತಿ ಮುದ್ರಣವಾಗಿದ್ದರಿಂದ ಗ್ರಾಮ ಪಂಚಾಯತಿಯ ಮೊದಲ ಹಂತದಲ್ಲಿ ನಡೆದ ಚುನಾವಣೆ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಕ್ಕೆ ಗುರುವಾರ ಮರುಮತದಾನ ನಡೆದಿದ್ದು, ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಿಣ್ಣಿ ಸಡಕ ಗ್ರಾಮಪಂಚಾಯತಿ ಮತ್ತು ಬಳ್ಳಾರಿ ಜಿಲ್ಲೆಯ ಶಂಕರಬಂಡೆ ಗ್ರಾಮ ಪಂಚಾಯತಿಯಲ್ಲಿ ಮರು ಮತದಾನ ನಡೆದಿದೆ.
ಕಿಣ್ಣಿ ಸಡಕ ಗ್ರಾಮ ಪಂಚಾಯತಿಯಲ್ಲಿ ಶೇ.59.45 ರಷ್ಟು ಮತದಾನವಾಗಿದ್ದು, ಶಂಕರಬಂಡೆ ಗ್ರಾಮ ಪಂಚಾಯತಿಯಲ್ಲಿ ಶೇ.63.47 ರಷ್ಟು ಮತದಾನವಾಗಿದೆ. ಡಿಸೆಂಬರ್ 22 ರಂದು ನಡೆದ ಚುನಾವಣೆ ಸಂದರ್ಭದಲ್ಲಿ ಎರಡು ಕ್ಷೇತ್ರದಲ್ಲಿ ಬ್ಯಾಲೆಟ್ ಪೇಪರ್‌ನಲ್ಲಿ ತಪ್ಪು ಮಾಹಿತಿ ಮುದ್ರಣವಾಗಿತ್ತು. ಅಭ್ಯರ್ಥಿಗಳ ಚಿಹ್ನೆ ಬದಲಾಗಿದ್ದರಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿತ್ತು. ಈ ದೂರಿನ ಅನ್ವಯ ಆಗಿರುವ ಲೋಪದೋಷವನ್ನು ಸರಿಪಡಿಸಿ ಮರು ಮತದಾನ ನಡೆಸಲಾಯಿತು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಎರಡನೇ ಹಂತದ ಚುನಾವಣಾ ಬಹಿರಂಗ ಪ್ರಚಾರಕ್ಕೆ ಇಂದು ತೆರೆ :
ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ. ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದೆ. ಗ್ರಾಮ ಪಂಚಾಯತಿ ಚುನಾವಣೆಯು ಯಾವುದೇ ಪಕ್ಷದ ಚಿಹ್ನೆ ಮೇಲೆ ನಡೆಯುವುದಿಲ್ಲ. ಪಕ್ಷಾತೀತವಾಗಿ ನಡೆಯುತ್ತಿದ್ದರೂ ಪಕ್ಷದ ಜತೆ ಗುರುತಿಸಿಕೊಂಡಿರುವ ಅಭ್ಯರ್ಥಿಗಳೇ ಕಣಕ್ಕಿಳಿದಿದ್ದಾರೆ. ಅವರ ಗೆಲುವಿಗೆ ರಾಜಕೀಯ ಪಕ್ಷಗಳ ನಾಯಕರು ಸಹ ಪಣತೊಟ್ಟು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಚುನಾವಣೆ ಮೂಲಕ ಬೇರುಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು ಸಹ ಪಕ್ಷಗಳ ತಂತ್ರಗಾರಿಕೆಯಾಗಿದ್ದು, ಹೀಗಾಗಿ ರಾಜಕೀಯ ಪಕ್ಷಗಳು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ : ಗ್ರಾ. ಪಂ. ಚುನಾವಣೆ: ಇಂದು ತೊಲಮಾಮಿಡಿಯಲ್ಲಿ ಮರು ಮತದಾನ
ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗಳು ಇಂದು ಸಂಜೆ 6 ಗಂಟೆಯ ನಂತರ ಕ್ಷೇತ್ರದಲ್ಲಿ ಇರುವಂತಿಲ್ಲ. ಬಹಿರಂಗ ಪ್ರಚಾರವನ್ನು ಮುಕ್ತಾಯಗೊಳಿಸಿ ಸಂಜೆಯ ವೇಳೆಗೆ ಕ್ಷೇತ್ರಕ್ಕೆ ಸಂಬಂಧಪಡದವರು ಹೊರಗೆ ಹೋಗುವಂತೆ ಚುನಾವಣಾ ಆಯೋಗವು ಸೂಚನೆ ನೀಡಿದೆ. ಒಂದು ವೇಳೆ ಕ್ಷೇತ್ರಕ್ಕೆ ಸಂಬಂಧಪಡದವರು ಕ್ಷೇತ್ರದಲ್ಲಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ತಿಳಿಸಿದೆ. ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರದಲ್ಲಿ ಮದ್ಯ ಮಾರಾಟವನ್ನು ಸಹ ನಾಳೆ ಸಂಜೆ ಬಳಿಕ ನಿಷೇಧಿಸಲಾಗಿದೆ.