ಬೆಂಗಳೂರು:ಶೇ.40 ರಷ್ಟು ಲೂಟಿ ಹೊಡೆದವರು ದೇಶಭಕ್ತರಾ ಎಂದು ಪ್ರಶ್ನಿಸಿರುವ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ರಾಷ್ಟ್ರೀಯ ನಾಯಕರು, ಸಂಸದರೂ ಆಗಿದ್ದಾರೆ. ಅವರು ಸ್ವಲ್ಪ ಜ್ಞಾನವನ್ನಿಟ್ಟುಕೊಂಡು ಮಾತನಾಡಬೇಕು. ಹೆರಾಲ್ಡ್ ವಿಚಾರದಲ್ಲಿ ತೆರಿಗೆ ಹಣವನ್ನು ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡವರು ನೀವು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿರುಗೇಟು ನೀಡಿದ್ದಾರೆ.
ಲೋಕಾಯುಕ್ತಕ್ಕೆ ದಾಖಲೆ ಕೊಡಿ:ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಿನ್ನೆ ರಾಹುಲ್ ಗಾಂಧಿಯವರು ಕರ್ನಾಟಕ ಸರ್ಕಾರವನ್ನು ಶೇಕಡಾ 40ರಷ್ಟು ಕಮಿಷನ್ ಸರ್ಕಾರ ಎಂದು ಹೇಳಿದ್ದಾರೆ. ಕಬ್ಬಿಣದ ಕಾಲಿನ ರಾಹುಲ್ ಗಾಂಧಿ ಅವರು ಇದಕ್ಕೆ ಆಧಾರ ಒದಗಿಸಬೇಕು. ಲೋಕಾಯುಕ್ತಕ್ಕೆ ದಾಖಲೆ ಕೊಡಲಿ. ಪೊಲೀಸರಿಗೆ ದೂರು ಕೊಡಬಹುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದ್ದಾರೆ. ಆದರೂ ಕೂಡ ಸಾಕ್ಷ್ಯಾಧಾರ ಇಲ್ಲದ ಕಾರಣ ದೂರು ಸಲ್ಲಿಸಲು ಆಗುತ್ತಿಲ್ಲ. ಒಂದು ರೀತಿಯಲ್ಲಿ ಬೀದಿಯಲ್ಲಿ ಹೋಗುವ ರಾಮಣ್ಣ, ಸೋಮಣ್ಣನ ಹಾಗೆ ಕಬ್ಬಿಣದ ಕಾಲಿನ ರಾಹುಲಣ್ಣನೂ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ:ಹೆಸರಾಂತ ಪ್ರಧಾನಮಂತ್ರಿಗಳ ಕುಟುಂಬ ಹಾಗೂ ಹೆಸರಾಂತ ಗಾಂಧಿ ಕುಟುಂಬದಿಂದ ಬಂದ ಅವರಿಗೆ ಇಷ್ಟೊಂದು ಕನಿಷ್ಠ ಜ್ಞಾನ ಇಲ್ಲವೇ? ಎಂದು ಪ್ರಶ್ನಿಸಿದರು. ಈ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆ. ಕಾಶ್ಮೀರವನ್ನು ಉಳಿಸಿದವರು ದೇಶಭಕ್ತರು, ರೈತರಿಗೆ ಮನೆಮನೆಗೆ ವರ್ಷಕ್ಕೆ 10 ಸಾವಿರದಂತೆ 5 ವರ್ಷಗಳಲ್ಲಿ 50 ಸಾವಿರ ಕೊಟ್ಟವರು ರಾಷ್ಟ್ರಭಕ್ತರು, ಮನೆಮನೆಗೆ ಶೌಚಾಲಯ, ಮನೆಮನೆಗೆ ನಲ್ಲಿ ನೀರು ಕೊಟ್ಟವರು ರಾಷ್ಟ್ರಭಕ್ತರು. ನೀವು ಈ ದೇಶದ ತೆರಿಗೆ ಹಣವನ್ನು ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಹಾಕಿ ಸ್ವಂತ ಮನೆಯ ಆಸ್ತಿ ಮಾಡಿಕೊಂಡವರು. ಇದು ಸುಮಾರು 20 ಸಾವಿರ ಕೋಟಿಗಿಂತ ಹೆಚ್ಚು. ಸ್ವಾತಂತ್ರ್ಯ ಹೋರಾಟಗಾರರು ಷೇರುದಾರರಾಗಿದ್ದ ಸಂಸ್ಥೆ ಇದು ಎಂದು ತಿಳಿಸಿದರು.
ದೇಶದ ವಿಕಾಶ ಮಾಡುವ ದೃಷ್ಟಿ ಮೋದಿಗಿದೆ: ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಜಾಮೀನಿನಡಿ ಇರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ. ಜಾಮೀನು ಸಿಗದಿದ್ದರೆ ಇವರು ಜೈಲಿನಲ್ಲಿ ಇರಬೇಕಾಗುತ್ತಿತ್ತು. ನಮ್ಮ ನರೇಂದ್ರ ಮೋದಿಯವರು ಚಹಾ ಮಾರುತ್ತ, ಪೋಸ್ಟರ್ ಅಂಟಿಸುತ್ತ, ಬ್ಯಾನರ್, ಫ್ಲ್ಯಾಗ್ ಕಟ್ಟುತ್ತ, ಶಾಖೆಗೆ ಹೋಗಿ ದುಡಿದವರು. ಲಕ್ಷಾಂತರ ಜನರ ಮನೆಗಳಿಗೆ ಹೋಗಿದ್ದಾರೆ. ನಮ್ಮ ದೇಶದ ಸರ್ವಾಂಗೀಣ ವಿಕಾಸ ಮಾಡುವ ದೃಷ್ಟಿ ಮೋದಿಯವರಿಗಿದೆ. ಸ್ವಾತಂತ್ರ್ಯ ಹೋರಾಟ ಬಿಜೆಪಿ ಮಾಡಿಯೇ ಇಲ್ಲ ಎನ್ನುತ್ತೀರಿ; ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಅವರು ಸ್ವಾತಂತ್ರ್ಯ ಹೋರಾಟಗಾರರು. ಕಾಂಗ್ರೆಸ್‍ನ ಜಂಟಿ ಕಾರ್ಯದರ್ಶಿಯಾಗಿದ್ದರು ಎಂದು ಉತ್ತರ ನೀಡಿದರು.