ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಕಾರ್ಡ್‌ದಾರರಿಗೆ ಅಕ್ಕಿ ಬದಲು ಹಣ ನೀಡಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘ ವಿರೋಧಿಸಿದೆ. ಕೇಂದ್ರ ಸರ್ಕಾರವು ಈಗಾಗಲೇ ಪ್ರತಿ ಬಿಪಿಎಲ್ ಸದಸ್ಯನಿಗೆ 5 ಕೆಜಿ ಅಕ್ಕಿ ವಿತರಿಸುತ್ತಿದೆ. ಅಕ್ಕಿ ಸಿಗದಿದ್ದರೆ ರಾಜ್ಯ ಸರ್ಕಾರವು ರೈತರಿಂದ ನೇರವಾಗಿ ರಾಗಿ, ಜೋಳ, ಗೋಧಿ ಖರೀದಿಸಿ ವಿತರಿಸಬೇಕು. ಇದರಿಂದಾಗಿ ಬೆಳೆ ಬೆಳೆದ ರೈತರಿಗೂ ಅನುಕೂಲವಾಗುತ್ತದೆ. ರಾಜ್ಯದಲ್ಲಿ ಲಕ್ಷಾಂತರ ಟನ್ ರಾಗಿ ದಾಸ್ತಾನಿದೆ. ಅಕ್ಕಿ ಬದಲು ಪರ್ಯಾಯವಾಗಿ 3 ಕೆಜಿ ರಾಗಿ, 2 ಕೆಜಿ ಗೋಧಿ ವಿತರಿಸಿದರೆ ಪಡಿತರದಾರರಿಗೆ ಅನುಕೂಲ. 26 ರೂ.ಗೆ ಸಕ್ಕರೆ ಸಿಗುತ್ತಿದೆ, ಅದನ್ನು ಕೊಡಬಹುದು ಎಂದು ಸಲಹೆ ನೀಡಿದೆ.
ಪಡಿತರ ವಿತರಣೆಗೆ ನಮಗೆ ಕಮಿಷನ್ ಹಣ ಸಿಗುತ್ತದೆ. ಹಮಾಲಿಗಳಿಗೆ ಕೆಲಸ ಸಿಗುವ ಜತೆಗೆ ಲಾರಿ ಮಾಲೀಕರಿಗೆ ಸಾಗಣೆ ವೆಚ್ಚವೂ ದೊರೆಯುತ್ತಿದೆ. ಪ್ರತಿ ಕ್ವಿಂಟಲ್ ಪಡಿತರ ವಿತರಣೆಗೆ ಸದ್ಯ 124 ರೂ.ಸಿಗುತ್ತಿದೆ. 10 ಕೆಜಿ ಪಡಿತರ ವಿತರಿಸಿದರೆ ಹೆಚ್ಚು ಕಮಿಷನ್ ಹಣ ಸಿಗುತ್ತಿತ್ತು. ಆದರೆ, ಕಾರ್ಡ್‌ದಾರರಿಗೆ ಹಣ ಕೊಟ್ಟರೆ ನಮಗೆ ಸಿಗಬೇಕಿದ್ದ ಕಮಿಷನ್ ಹಣವೂ ಖೋತಾ ಆಗುತ್ತದೆ. ಈಗಾಗಲೇ ಜೀವನ ನಿರ್ವಹಣೆ ಕಷ್ಟಪಡುತ್ತಿರುವ ನಮಗೆ ಮುಂದೆ ಇನ್ನಷ್ಟು ಕಷ್ಟವಾಗಲಿದೆ. ಆದ್ದರಿಂದ, ಕಾರ್ಡ್‌ದಾರರಿಗೆ ಹಣ ಬದಲು ಬೇರೆ ಧಾನ್ಯ ವಿತರಿಸಬೇಕು ಎಂದು ಸಂಘ ಆಗ್ರಹಿಸಿದೆ.