ಬೆಂಗಳೂರು: ಹಣ ಕೊಟ್ಟು ಮತವನ್ನು ಖರೀದಿ ಮಾಡುವುದೇ ಇವರ ಸಾಧನೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ 6000 ಹಣ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರು ಪ್ರಜಾಪ್ರಭುತ್ವದ ನೀತಿಗಳನ್ನು ಗಾಳಿಗೆ ತೂರಿದ್ದಾರೆ. ಒಬ್ಬ ವ್ಯಕ್ತಿ ಸಂವಿಧಾನದ ಹಕ್ಕನ್ನು ಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.
ರಾಜ್ಯದ ಜನರನ್ನು ಇವರು ಕೀಳು ಮಟ್ಟದಲ್ಲಿ ಅಳೆದು ತೂಗಿದ್ದಾರೆ. ರಮೇಶ್ ಜಾರಕಿಹೊಳಿ, ಸಿಎಂ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ವಿರುದ್ಧ ನಮ್ಮ ಪಕ್ಷ ಈಗಾಗಲೇ ದೂರು ನೀಡಿದೆ. ಕೇಂದ್ರ ಚುನಾವಣಾ ಆಯೋಗಕ್ಕೂ ನಾವು ವಿವರವಾದ ದೂರನ್ನು ನೀಡಿದ್ದೇವೆ. ಚುನಾವಣಾ ಆಯೋಗ ಅವರ ವಿರುದ್ಧ ಕ್ರಮ ಜರುಗಿಸುವ ವಿಶ್ವಾಸ ಇದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಉತ್ತಮ ಆಡಳಿತ ನೀಡಲು ಅಧಿಕಾರ ಬಯಸುತ್ತಾ ಇದೆ. ಜಲ ಸಂಪನ್ಮೂಲ ಯೋಜನೆಗೆ 40 ಸಾವಿರ ಕೋಟಿಯ ಕೊಡುಗೆ ಕಾಂಗ್ರೆಸ್ ನೀಡಿದೆ. ನವ ಕರ್ನಾಟಕ ನಿರ್ಮಾಣ ಮಾಡಲು ಜನರು ನಮಗೆ ಶಕ್ತಿ ನೀಡಿದ್ದಾರೆ. ಉತ್ತರ ಕರ್ನಾಟಕಕ್ಕೆ ಬಹುತೇಕ ಎಲ್ಲಾ ಯೋಜನೆ ಕಾಂಗ್ರೆಸ್ ಸರ್ಕಾರ ನೀಡಿತ್ತು. ನಮ್ಮ ಎರಡು ಯೋಜನೆಗಳು ಕಾಂಗ್ರೆಸ್ ಪಕ್ಷದ ನಿಷ್ಠೆ ಮತ್ತು ಜನರ ಕಾಳಜಿ ತೋರಿಸಿದೆ ಎಂದು ಸುರ್ಜೇವಾಲಾ ಅವರು ಹೇಳಿದ್ದಾರೆ.
200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆ ರಾಜ್ಯದ ಜನರಿಗೆ ಸಹಕಾರ ಆಗಲಿದೆ. ಕಾಂಗ್ರೆಸ್ ಸರ್ಕಾರ ಬಂದ್ರೆ ಬ್ರಾಂಡ್ ಬೆಂಗಳೂರು, ಬ್ರಾಂಡ್ ಮೈಸೂರು, ಬ್ರಾಂಡ್ ಮಂಗಳೂರು ಆಗುತ್ತೆ. ನಮ್ಮ ಶಾಸಕರು, ಎಂಎಲ್ಸಿಗಳು ರಾಜ್ಯದ ಪ್ರತಿ ಮನೆಗೆ ಹೋಗ್ತಾರೆ. ಫೆಬ್ರವರಿ 5 ರಿಂದ ನಮ್ಮ ನಾಯಕರು ಮನೆ ಮನೆಗೆ ಹೋಗಿ ರಿಜಿಸ್ಟರ್ ಮಾಡ್ತಾರೆ. ಮಿಸ್ಟರ್ ಮೋದಿ, ಮಿಸ್ಟರ್ ಬೊಮ್ಮಾಯಿ, ಮಿಸ್ಟರ್ ಕಟೀಲ್ ನಿಮ್ಮ ಸಾಧನೆ ಏನು?. ನಿಮ್ಮ ಸರ್ಕಾರದ ನೀತಿ ರಾಜ್ಯದಲ್ಲಿ ಬಹಳ ತೊಂದರೆ ಉಂಟು ಮಾಡಿದೆ ಎಂದರು.
ಬಿಜೆಪಿಯಿಂದ ಅಪಪ್ರಚಾರ: ತಮ್ಮ ವಿರುದ್ಧ ಗೃಹ ಸಚಿವರು ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಕಿಮ್ಮನೆ ರತ್ನಾಕರ್ ಅವರು, ಪ್ರಯತ್ನ ಪಡುತ್ತಿದ್ದಾರೆ. ಕುಕ್ಕರ್ ಬ್ಲಾಸ್ಟ್ ಪ್ರಕರಣ ಸಂಬಂಧ ಎನ್ಐಎದವರು ನನ್ನ ಮನೆಗೆ, ನಮ್ಮ ಪಕ್ಷದ ಕಚೇರಿಗೆ ಬಂದಿದ್ದರು. ಆರೋಪಿ ವಾಸ ಇದ್ದ ಆ ಬಿಲ್ಡಿಂಗ್ನಲ್ಲಿ ನಾಲ್ಕು ಮನೆಗಳು ಇವೆ. ಒಂದು ನಮ್ಮ ಪಕ್ಷದ ಆಫೀಸ್, 3 ಕುಟುಂಬಗಳು ಇವೆ. ಅವರು ಬಾಡಿಗೆ ಇದ್ದಾರೆ. ನಾವು ಬಾಡಿಗೆ ಇದ್ದೇವೆ. 8 ವರ್ಷದ ಹಿಂದೆ ಅದನ್ನ ನಾವು ಬಾಡಿಗೆ ತೆಗೆದುಕೊಂಡಿದ್ವಿ.
ನಮ್ಮ ಅಣ್ಣನ ಮಗನ ಹೆಸರಲ್ಲಿ ತೆಗೆದುಕೊಂಡಿದ್ವಿ. 10 ಲಕ್ಷ ರೂ. ಅಡ್ವಾನ್ಸ್ ಕೊಟ್ಟಿದ್ದೇವೆ. ತಿಂಗಳಿಗೆ ಸಾವಿರ ರೂ. ಬಾಡಿಗೆ ಕೊಡುತ್ತೇವೆ. ಡಾಕ್ಯುಮೆಂಟ್ ಕೇಳುವುದಕ್ಕೆ ಬಂದಿದ್ರು. ಅವುಗಳನ್ನ ಕೊಟ್ಟಿದ್ದೇವೆ. ಬೇರೆ ಏನೂ ಇಲ್ಲ ಎಂದು ತಿಳಿಸಿದರು.
ಈ ಬಾರಿ ಸೋಲುತ್ತೇವೆ ಎಂದು ಬಿಜೆಪಿಯವರಿಗೆ ಆತಂಕ ಶುರುವಾಗಿದೆ. ಅದಕ್ಕೆ ಬಿಜೆಪಿ ಅವರೇ ಇದನ್ನ ಅಪಪ್ರಚಾರ ಮಾಡಿದ್ದಾರೆ. ಈ ದೇಶ ಅಲ್ಲ ಅಮೆರಿಕದವರು ಬಂದು ನನ್ನ ತಪ್ಪಿತಸ್ಥರಾಗಿ ಮಾಡಿದರೂ ಸಹ ನನ್ನ ಬಳಿ 10 ರೂ. ಸಿಗುವುದಿಲ್ಲ. ಗೃಹ ಸಚಿವರು ಧನ ಲಕ್ಷ್ಮೀ ಪೂಜೆ ದಿನ 5,000 ಜನಕ್ಕೆ ಬೆಳ್ಳಿ ನಾಣ್ಯವನ್ನ ಕೊಟ್ಟರು. ಯಾವುದಕ್ಕೆ ಕೊಟ್ಟರು ಏತಕ್ಕಾಗಿ ಕೊಟ್ಟರು?. ಮಹಿಳೆಯರಿಗೆ ಸೀರೆ ಕೊಟ್ಟಿದ್ದಾರೆ ಎಂದೂ ಇದೇ ವೇಳೆ ಆರೋಪಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸಭೆ: ಕೆಪಿಸಿಸಿ ನೂತನ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಮಹತ್ವದ ಸಭೆ ನಡೆಯುತ್ತಿದೆ. ಹಾಲಿ ಶಾಸಕರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಡಿಸಿಸಿ ಅಧ್ಯಕ್ಷರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಟಿಕೇಟ್ ಆಕಾಂಕ್ಷಿಗಳು ಕೂಡ ಸಭೆಗೆ ಹಾಜರಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಡಿಸೆಂಬರ್ 3ರಿಂದ ನಡೆಯಲಿರುವ ಎರಡನೇ ಹಂತದ ಕಾಂಗ್ರೆಸ್ ಪ್ರಚಾರ, ಕಾಂಗ್ರೆಸ್ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕುರಿತು ಸಮಾಲೋಚನೆ ನಡೆಸಲಾಗುತ್ತಿದ್ದು, ಎಲ್ಲ ಪದಾಧಿಕಾರಿಗಳಿಗೂ ಟಾಸ್ಕ್ ನೀಡಲಾಗಿದೆ.
ಇದನ್ನೂ ಓದಿ :ಕಾಂಗ್ರೆಸ್ ಸುಳ್ಳಿನ ಗೋಪುರ ಕಟ್ಟಿದೆ: ಅಭಿವೃದ್ಧಿಗಾಗಿ ಜನರೇ ಬಿಜೆಪಿ ಆಯ್ಕೆ ಮಾಡ್ತಾರೆ: ಅರುಣ್ ಸಿಂಗ್