ಬೆಂಗಳೂರು:ಸ್ನೇಹ, ಶಾಂತಿ, ಶ್ರದ್ಧೆ, ಭಕ್ತಿ ಮತ್ತು ಸೌಹಾರ್ದತೆಯ ಸಮ್ಮಿಲನವಾಗಿ ರಂಜಾನ್ ಆಚರಿಸಲಾಗುತ್ತದೆ. ಉದ್ಯಾನ ನಗರಿಯಲ್ಲೂ ಸಹ ರಂಜಾನ್ ಆಚರಣೆ ಹತ್ತು ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.
ಶಿವಾಜಿನಗರ ಹಾಗೂ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಈಗಾಗಲೇ ಹಬ್ಬದ ಖರೀದಿ ಜೋರಾಗಿಯೇ ನಡೆಯುತ್ತಿದೆ. ಈ ಬಾರಿಯ ರಂಜಾನ್ ಹಬ್ಬಕ್ಕಾಗಿ ಎಥ್ನಿಕ್ ಹಾಗೂ ಮಾಡರ್ನ್ ಟ್ರೆಂಡ್‌ನಲ್ಲಿ ಉಡುಗೆ -ತೊಡುಗೆಗಳು ರಾರಾಜಿಸುತ್ತಿವೆ.
ಹೆಣ್ಣು ಮಕ್ಕಳ ಆಧುನಿಕ ಫ್ಯಾಷನ್‌ನ ಶರಾರಾ, ಘಾಗ್ರಾ, ಲಾಂಗ್ ಕಟ್, ಗೌನ್, ಫರಾಕ್, ನೆಟ್ ಫ್ರಾಕ್ ಜೊತೆಗೆ ಸಾಂಪ್ರದಾಯಿಕ ಸೆಲ್ವಾರ್-ಕಮೀಜ್ ಮತ್ತು ಗಂಡು ಮಕ್ಕಳ ಅಫ್ಘಾನಿ ಸೂಟ್, ಜುಬ್ಬಾ, ಶೇರ್ವಾನಿ ಈ ಬಾರಿಯ ಪ್ರಮುಖ ಆಕರ್ಷಣೆ. ಉಳಿದಂತೆ ಜುಬ್ಬಾ-ಕುರ್ತಾ, ಪ್ಯಾಂಟ್-ಶರ್ಟ್ ವ್ಯಾಪಾರವೂ ಜೋರಾಗಿ ನಡೆಯುತ್ತಿದೆ.
ಮಾರ್ಕೆಟ್‌ನಲ್ಲಿ 500ರಿಂದ 50 ಸಾವಿರ ರೂ.ವರೆಗಿನ ಡ್ರೆಸ್‌ಗಳು ಸಿಗುತ್ತವೆ. ಖರೀದಿಸುವವರ ಅಭಿರುಚಿಗೆ ಮತ್ತು ಜೇಬಿನ ತೂಕಕ್ಕೆ ತಕ್ಕಂತೆ ಬಟ್ಟೆಗಳು ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಸಿಗುತ್ತವೆ. ದೆಹಲಿ, ಗುಜರಾತ್, ಸೂರತ್, ಕಾನ್ಪುರ, ಬನಾರಸ್‌ನಿಂದ ಇಲ್ಲಿಗೆ ಬಟ್ಟೆಗಳನ್ನು ತರಲಾಗುತ್ತದೆ. ಈ ವಾರದಿಂದ ರಂಜಾನ್ ವ್ಯಾಪಾರ ಇನ್ನಷ್ಟು ಕಳೆಗಟ್ಟಲಿದೆ ಎನ್ನುತ್ತಾರೆ ಬಟ್ಟೆ ಅಂಗಡಿ ಮಾಲೀಕ ಇಮ್ರಾನ್.
ಶಿವಾಜಿನಗರದಲ್ಲಿ ತರಹೇವಾರಿ ಬಟ್ಟೆಗಳು ಅದಲ್ಲದೆ, ಹಬ್ಬಕ್ಕೆ ಮೆಹಂದಿ, ಮನೆಗೆ ಬೇಕಾಗುವ ವಸ್ತುಗಳು, ಆಭರಣಗಳು, ಬಳೆಗಳು, ಪಾತ್ರೆಗಳು, ವ್ಯಾನಿಟಿ ಬ್ಯಾಗ್, ಉಡುಗೊರೆ ವಸ್ತುಗಳು ಎಲ್ಲವೂ ಇಲ್ಲಿ ಒಂದೇ ರಸ್ತೆಯಲ್ಲಿ ಸಿಗುತ್ತಿವೆ.