ಬೆಂಗಳೂರು :ಸಿಡಿ ಪ್ರಕರಣದಲ್ಲಿ ಆರೋಪಕ್ಕೆ ಸಿಲುಕಿದ್ದಾರೆ ಎನ್ನಲಾದ ಮಾಜಿ ಪತ್ರಕರ್ತ ಲಕ್ಷ್ಮೀಪತಿ ಇದೀಗ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ದೊಡ್ಡಬಳ್ಳಾಪುರದ ಲಕ್ಷ್ಮೀಪತಿ ಬೆಂಗಳೂರಿನ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಸದಾಶಿವನಗರ ಠಾಣೆ ಪೊಲೀಸರು ಹಾಗೂ ವಿಶೇಷ ತನಿಖಾ ತಂಡ(ಎಸ್ಐಟಿ)ಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಪ್ರಕರಣದಲ್ಲಿ ಯಾವುದೇ ಪಾತ್ರವಿಲ್ಲದಿದ್ದರೂ ಎಸ್ಐಟಿ ತನ್ನನ್ನು ಸಿಲುಕಿಸುವ ಸಾಧ್ಯತೆ ಇದೆ. ರಾಜಕೀಯ ಕಾರಣಗಳಿಗಾಗಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಪೊಲೀಸರು ತನ್ನನ್ನು ಬಂಧಿಸಬಹುದಾಗಿದೆ. ಹೀಗಾಗಿ ತನಗೆ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿ ಲಕ್ಷ್ಮಿಪತಿ ಅರ್ಜಿ ಸಲ್ಲಿಸಿದ್ದಾರೆ.