ಕರ್ನಾಟಕ

karnataka

ETV Bharat / state

4 ತಿಂಗಳ ಮೊದಲೇ ಸಿಡಿ ಬಗ್ಗೆ ಗೊತ್ತಿತ್ತು, ಮಹಾನ್ ನಾಯಕನಿಂದ ಇದೆಲ್ಲಾ ನಡೆದಿದೆ: ರಮೇಶ್ ಜಾರಕಿಹೊಳಿ - VIDEO - ramesh jarakiholi CD case updates

ಮಾಜಿ ಸಚಿವ ರಮೇಶ್ ಜಾರಕಿಹೊಳಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ

By

Published : Mar 9, 2021, 9:51 AM IST

Updated : Mar 9, 2021, 11:20 AM IST

09:47 March 09

ಸಿಡಿ ಪ್ರಕರಣದ ಬಗ್ಗೆ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ, ದಯವಿಟ್ಟು ಮಾಧ್ಯಮದವರು ನನಗೆ ಸಹಕಾರ ಕೊಡಿ ಎನ್ನುತ್ತಾ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭಾವುಕರಾದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ

ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ, ಇಂದು ಬೆಂಗಳೂರಿನ ಸದಾಶಿವ ನಗರದಲ್ಲಿ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ನನ್ನ ಪರವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು. ನನಗೆ ಮಾನಸಿಕವಾಗಿ ಧೈರ್ಯ ತುಂಬಿದ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ನನ್ನ ವಂದನೆಗಳು. ನೂರಕ್ಕೆ ನೂರರಷ್ಟು ಇದು ನಕಲಿ ಸಿಡಿ. ನಾನು ಅಪರಾಧಿಯಲ್ಲ, ನಿರಪರಾಧಿ ಎಂದು ಹೇಳಿದರು.  

4 ತಿಂಗಳ ಮೊದಲೇ ಸಿಡಿ ಬಗ್ಗೆ ಗೊತ್ತಿತ್ತು:ನಾಲ್ಕು ತಿಂಗಳ ಮೊದಲೇ ನನಗೆ ಈ ಸಿಡಿ ಬಗ್ಗೆ ಗೊತ್ತಿತ್ತು. 26 ಗಂಟೆ ಮೊದಲೇ ನನಗೆ ಸಿಡಿ ಬಿಡುಗಡೆಯಾಗುವ ಕುರಿತು ಕರೆ ಬಂದಿತ್ತು. ನಾಳೆ ನಿನ್ನ ಸಿಡಿ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ್ದರು. ಹೈಕಮಾಂಡ್​ ನನಗೆ ಧೈರ್ಯದಿಂದ ಇರು ಎಂದು ಹೇಳಿತ್ತು. ಕಾನೂನು ಕ್ರಮದ ಬಗ್ಗೆ ಬಾಲಚಂದ್ರ ನನಗೆ ಸಲಹೆ ನೀಡಿದ್ದರು. ನಾನು ಧೈರ್ಯದಿಂದ ಕಾನೂನು ಹೋರಾಟಕ್ಕೆ ಹೋಗಲಿಲ್ಲ. ಯಾವುದಕ್ಕೂ ಹೆದರದೇ ಸಭೆ ಮುಗಿಸಿ ಮನೆಗೆ ಬಂದಿದ್ದೆ. ಅಂದು ವಚನಾನಂದ ಶ್ರೀಗಳ ಜೊತೆಗೆ ಮಾತುಕತೆ ನಡೆಸಿದ್ದೆ ಎಂದು ತಿಳಿಸಿದರು.

ಮಹಾನ್ ನಾಯಕನಿಂದ ಇದೆಲ್ಲಾ ನಡೆದಿದೆ: ನಾನು ಬಹಳ ದುಃಖದಲ್ಲಿದ್ದೇನೆ. ದಯವಿಟ್ಟು ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. 2020ರ ಫೆಬ್ರವರಿ 26 ರಂದು ನಾನು ಮಂತ್ರಿಯಾದೆ. 4-5 ದಿನದಿಂದ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದೇನೆ. ರಾಜೀನಾಮೆ ನೀಡಿರುವುದು ನನ್ನ ವೈಯಕ್ತಿಕ ನಿರ್ಧಾರ. ಸಿಡಿ ಬಿಡುಗಡೆಯಾದ ಬಳಿಕ ಒಂದು ದಿನ ರಾತ್ರಿ ಕಾದು ನಂತರ ರಾಜೀನಾಮೆ ಕೊಟ್ಟೆ. ರಾಜೀನಾಮೆ ಕೊಟ್ಟು ನೇರವಾಗಿ ಊರಿಗೆ ಹೋಗಿದ್ದೆ. ನಂತರ ಏನು ಬೆಳವಣಿಗೆ ನಡೆದಿದೆ ಎಂದು ನನಗೆ ತಿಳಿದಿಲ್ಲ. ಒಬ್ಬ ಮಹಾನ್ ನಾಯಕನಿಂದ ಇದೆಲ್ಲಾ ನಡೆದಿದೆ. ಆತ ನಾನು ಮಂತ್ರಿಯಾದಾಗ ನನಗೆ ಚಾಲೆಂಜ್​ ಹಾಕಿದ್ದ. ನಾನು ಸಚಿವ ಸ್ಥಾನದಲ್ಲಿ ಮುಂದುವರೆಯುವ ಬಗ್ಗೆ ನನಗೆ ಚಾಲೆಂಜ್​ ಮಾಡಿದ್ದ. ಅವರ ಬಗ್ಗೆ ಈಗ ಹೇಳಲು ನಾನು ಇಚ್ಛಿಸುವುದಿಲ್ಲ. ಇದೊಂದು ಬಹಳ ಸೂಕ್ಷ್ಮವಾದ ವಿಚಾರ. ಇದನ್ನು ರಾಜಕೀಯ ಮಾಡುವುದಕ್ಕೆ ಹೋಗಬಾರದು ಎಂದು ರಮೇಶ್ ಜಾರಕಿಹೊಳಿ ವಿವರಿಸಿದರು. 

ಬೆಂಗಳೂರಿನ 2 ಕಡೆ ಷಡ್ಯಂತ್ರ :ಈ ಸಿಡಿಗೆ ಬೆಂಗಳೂರಿನ ಎರಡು ಕಡೆ ಷಡ್ಯಂತ್ರ ರಚಿಸಲಾಗಿದೆ. ಯಶವಂತಪುರ, ಒರಿಯಾನ್​ ಮಾಲ್​ ಸೇರಿ ಬೆಂಗಳೂರಿನ 2 ಕಡೆ ಷಡ್ಯಂತ್ರ ನಡೆದಿದೆ. ಒರಾಯನ್​ ಮಾಲ್​ ಅಕ್ಕ-ಪಕ್ಕ 5 ನೇ ಮಹಡಿ, ಯಶವಂತಪುರ ಪೊಲೀಸ್​ ಠಾಣೆಯ ಅಕ್ಕ-ಪಕ್ಕದ 4 ನೇ ಮಹಡಿಯಲ್ಲಿ ಸಿಡಿಯ ಷಡ್ಯಂತ್ರ ನಡೆದಿದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನು ನಾನು ಬಿಡಲ್ಲ. ಅವರನ್ನು ಜೈಲಿಗೆ ಹಾಕಿಸುವವರೆಗೆ ನಾನು ಬಿಡುವುದಿಲ್ಲ. ಅದೆಷ್ಟೇ ದುಡ್ಡು ಖರ್ಚಾದರೂ ಪರವಾಗಿಲ್ಲ ಅವರನ್ನು ಜೈಲಿಗಟ್ಟುತ್ತೇನೆ ಎಂದು ಅಸಮಾಧಾನ ಹೊರಹಾಕಿದರು.

ಇದರಲ್ಲಿ 2+3+4 ಕೈವಾಡವಿದೆ:ನನ್ನ ಸಹೋದರ ಚಾಲಚಂದ್ರ ಜಾರಕಿಹೊಳಿಯ ಪ್ರತಿ ಮಾತಿಗೂ ನಾನು ಬದ್ಧನಾಗಿದ್ದೇನೆ. ಅವನು ಹೇಳುವ ಪ್ರಕಾರವೇ ಇದರಲ್ಲಿ ನನ್ನ ರಾಜಕೀಯ ಏಳ್ಗೆ ಸಹಿಸದ 2+3+4 ಜನರ ಕೈವಾಡವಿದೆ. ಕುಟುಂಬದ ಮರ್ಯಾದೆ ನನಗೆ ಮುಖ್ಯ. ನನಗೆ ರಾಜಕಾರಣ ಬೇಕಿಲ್ಲ, ಕುಟುಂಬದ ಗೌರವ ಮುಖ್ಯ. ಹೋದ ನನ್ನ ಕುಟುಂಬದ ಮರ್ಯಾದೆ ವಾಪಸ್​ ಬರಬೇಕು ಎಂದರು.

ಇನ್ನೂ 10 ಕಂಪ್ಲೇಂಟ್​ ಕೊಟ್ಟರೂ ನಾವು ಫೇಸ್​ ಮಾಡುತ್ತೇವೆ:ಈ ಹಿಂದೆ ಉಪಚುನಾವಣೆ ವೇಳೆಯೂ ನನ್ನ ಆಡಿಯೋ ಬಿಟ್ಟರು. ನಾನು ಅದನ್ನು ಎದೆಗುಂದದೇ ಎದುರಿಸಿದೆ. ನನ್ನ ತಪ್ಪಿಲ್ಲದಿದ್ದಾಗ ನಾನು ಹೆದರುವುದಿಲ್ಲ. ಇಂಥ ಇನ್ನೂ 10 ಕಂಪ್ಲೇಂಟ್​ ಕೊಟ್ಟರೂ ನಾವು ಫೇಸ್​ ಮಾಡುತ್ತೇವೆ ಎಂದು ಸವಾಲು ಹಾಕಿದರು.

ಯುವತಿಗೆ 5 ಕೋಟಿ ನೀಡಿರುವ ಮಾಹಿತಿ ಇದೆ:ನನಗೆ ಎಲ್ಲ ಪಕ್ಷದವರ ಮೇಲೆ ಗೌರವ ಇದೆ. ನಾವು ಈವರೆಗೆ ಯಾರ ವಿರುದ್ಧವೂ ಆರೋಪ ಮಾಡಿಲ್ಲ. ಹೆಚ್.ಡಿ.ಕುಮಾರಸ್ವಾಮಿ ನನ್ನ ಪರವಾಗಿ ಮಾತನಾಡಿದ್ದಾರೆ. ಮೊದಲು ಹೆಚ್.ಡಿ.ಕುಮಾರಸ್ವಾಮಿ, ರೇವಣ್ಣ ನನ್ನ ಪರ ಮಾತನಾಡಿದ್ದರು. ಸಿಡಿಯಲ್ಲಿದ್ದ ಯುವತಿಗೆ 50 ಲಕ್ಷ ಅಲ್ಲ, 5 ಕೋಟಿ ರೂಪಾಯಿ ಹಣ ನೀಡಿರುವ ಮಾಹಿತಿ ಇದೆ. ವಿದೇಶದಲ್ಲಿ ಆಕೆಗೆ 2 ಫ್ಲ್ಯಾಟ್​ ಸಹ ಕೊಟ್ಟಿದ್ದಾರೆ. ಇದರ ವಿರುದ್ಧ ನಾನೇಕೆ ದೂರು ನೀಡುವುದಕ್ಕೆ ಹೋಗಲಿ. ಆರೋಪವನ್ನು ನಾನು ಧೈರ್ಯವಾಗಿ ಎದುರಿಸುತ್ತೇನೆ. ನನ್ನ ವಿರೋಧಿಗಳಿಗೆ ಇದೊಂದು ದೊಡ್ಡ ಅಸ್ತ್ರವಾಗಿದೆ. ನನಗೆ ಖಾತೆ ಬೇಕೆಂದು ನಾನು ಕೇಳುವುದಕ್ಕೆ ಹೋಗಲ್ಲ. ನನಗೆ ನನ್ನ ಕುಟುಂಬದ ಗೌರವವೇ ಮುಖ್ಯ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾವುಕರಾದ ಸಾಹುಕಾರ್:ಸಿಡಿ ಪ್ರಕರಣದ ಬಗ್ಗೆ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ, ದಯವಿಟ್ಟು ಮಾಧ್ಯಮದವರು ನನಗೆ ಸಹಕಾರ ಕೊಡಿ ಎನ್ನುತ್ತಾ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭಾವುಕರಾದರು.

Last Updated : Mar 9, 2021, 11:20 AM IST

ABOUT THE AUTHOR

...view details