ಬೆಂಗಳೂರು: ಎಐಸಿಸಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮತ್ತೊಮ್ಮೆ ಮುಂದೂಡಿಕೆ ಆಗಿದೆ. ಏಪ್ರಿಲ್ 5 ರಂದು ನಡೆಯಬೇಕಿದ್ದ ಕಾರ್ಯಕ್ರಮ ಈ ಹಿಂದೆ 9ಕ್ಕೆ ಮುಂದೂಡಿಕೆ ಆಗಿತ್ತು. ಇದೀಗ ಈ ಕಾರ್ಯಕ್ರಮ ಮತ್ತೆ ಮುಂದೂಡಿಕೆ ಆಗಿದ್ದು, ಏಪ್ರಿಲ್ 16 ರಂದು ಸಮಾವೇಶ ನಡೆಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಭಾರತ್ ಜೋಡೋ ಯಾತ್ರೆಯ ಬಳಿಕ ರಾಜ್ಯಕ್ಕೆ ಎರಡನೇ ಭೇಟಿ ರೂಪದಲ್ಲಿ ರಾಹುಲ್ ಗಾಂಧಿ ಕೋಲಾರಕ್ಕೆ ಆಗಮಿಸಬೇಕಿತ್ತು. ಕಳೆದ ಚುನಾವಣೆ ವೇಳೆ ಕೋಲಾರದಲ್ಲಿ ಮಾಡಿದ ಭಾಷಣದಿಂದಾಗಿ ರಾಹುಲ್ ಗಾಂಧಿ ಸಂಸತ್ ಸ್ಥಾನ ಅನರ್ಹಗೊಂಡಿದೆ. ಅಂತೆಯೇ ತಮ್ಮ ಸಂಸತ್ ಸ್ಥಾನವನ್ನು ಅನರ್ಹಗೊಳಿಸಿರುವ ವಿಚಾರವನ್ನು ಪ್ರಶ್ನಿಸಿ ಕೋಲಾರದಿಂದಲೇ ಹೋರಾಟ ಆರಂಭಿಸಲು ಸತ್ಯಮೇವ ಜಯತೆ ಕಾರ್ಯಕ್ರಮಕ್ಕೆ ಚಾಲನೆ ನೀಡಲು ರಾಹುಲ್ ಗಾಂಧಿ ತೀರ್ಮಾನಿಸಿದ್ದರು.
ರಾಜ್ಯ ಕಾಂಗ್ರೆಸ್ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿಗೆ ಸ್ಪಂದಿಸಿದ್ದ ರಾಹುಲ್ ತಮ್ಮ ಹೋರಾಟವನ್ನು ಕೋಲಾರದಿಂದಲೇ ಆರಂಭಿಸುವ ಭರವಸೆ ನೀಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಇದೇ ಸಮಾವೇಶದಲ್ಲಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಅದನ್ನು ರಾಹುಲ್ ಗಾಂಧಿ ಅವರೇ ಘೋಷಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಕಾರ್ಯಕ್ರಮ ಎರಡನೇ ಬಾರಿ ಮುಂದೂಡಿಕೆಯಾಗಿದ್ದು, ಏಪ್ರಿಲ್ 16ರಂದು ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ!
ನಿನ್ನೆ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ನಡೆದಿದ್ದ ಕೋಲಾರ ನಾಯಕರ ಸಭೆಯಲ್ಲಿ ಸಮಾವೇಶ ಮುಂದೂಡಿಕೆ ಆಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಎಲ್ಲ ಕಳ್ಳರ ಉಪನಾಮ ಮೋದಿ ಎಂದೇ ಯಾಕಿರುತ್ತದೆ ಎಂದು ಕೋಲಾರದಲ್ಲಿ ರಾಹುಲ್ ಹೇಳಿಕೆಗಾಗಿ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಂಡಿತ್ತು. ಹೀಗಾಗಿ ಕೋಲಾರದಿಂದಲೇ 'ಸತ್ಯಮೇವ ಜಯತೇ' ಆರಂಭಿಸುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದರು. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಪ್ರವಾಸ ಹಮ್ಮಿಕೊಂಡಿರುವ ದಿನ ಏಪ್ರಿಲ್ 9ರಂದೇ ʼಸತ್ಯಮೇವ ಜಯತೇʼ ಹೋರಾಟಕ್ಕೆ ಚಾಲನೆ ನೀಡಲು ರಾಹುಲ್ ಗಾಂಧಿ ನಿರ್ಧರಿಸಿದ್ದರು. ಆದರೆ, ಕಾರಣಾಂತರಗಳಿಂದ ಕಾರ್ಯಕ್ರಮ ಮತ್ತೆ ಮುಂದೂಡಿಕೆಯಾಗಿದೆ.
ಹೆಚ್ ಎಂ ರೇವಣ್ಣ ಅಸಮಾಧಾನ:ಟಿಕೆಟ್ ಸಿಗದ ಹಿನ್ನೆಲೆ ಅಸಮಾಧಾನಗೊಂಡಿರುವಮಾಜಿ ಸಚಿವ, ಮಾಜಿ ವಿಧಾನಪರಿಷತ್ ಸದಸ್ಯ, ಹಿರಿಯ ಕಾಂಗ್ರೆಸ್ ಪಕ್ಷದ ಮುಖಂಡ ಹೆಚ್.ಎಂ.ರೇವಣ್ಣ ಅವರ ಮನವೊಲಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ. ಅಂತೆಯೇ ಬೆಂಗಳೂರಿನ ನಿವಾಸದಲ್ಲಿ ಅವರನ್ನು ಭೇಟಿಯಾಗಿ ಚರ್ಚಿಸುವ ಸಾಧ್ಯತೆ ಇದೆ. ಬೆಳಗ್ಗೆ ಒಂಬತ್ತು ಗಂಟೆಗೆ ರೇವಣ್ಣ ನಿವಾಸಕ್ಕೆ ತೆರಳಲಿರುವ ಮುಖಂಡರು ಅವರ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕ್ರಿಮಿನಲ್ ಕೇಸಲ್ಲಿ ಜೈಲು ಶಿಕ್ಷೆ: ನಾಳೆ ಸೂರತ್ ಕೋರ್ಟ್ಗೆ ರಾಹುಲ್ ಗಾಂಧಿ ಮೇಲ್ಮನವಿ ಸಾಧ್ಯತೆ