ಬೆಂಗಳೂರು: ಎಐಸಿಸಿ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕ ಗಾಂಧಿ ಭಾನುವಾರ ಬೆಂಗಳೂರು ನಗರದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತ ಪ್ರಚಾರ ನಡೆಸಿದರು. ರಾಹುಲ್ ಅವರು ಆನೇಕಲ್ ಹಾಗೂ ಪುಲಕೇಶಿ ನಗರದಲ್ಲಿ ಪ್ರಚಾರ ನಡೆಸಿ ಶಿವಾಜಿನಗರಕ್ಕೆ ಆಗಮಿಸಿದರು. ಪ್ರಿಯಾಂಕ ಗಾಂಧಿ ಬೆಂಗಳೂರಿನ ಮಹದೇವಪುರ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್‌ಶೋ ಮೂಲಕ ಮತಬೇಟೆ ನಡೆಸಿದರು. ಈ ಕಾರ್ಯಕ್ರಮದ ಬಳಿಕ ಶಿವಾಜಿನಗರಕ್ಕೆ ಆಗಮಿಸಿ ರಾಹುಲ್ ಗಾಂಧಿ ಜೊತೆ ಸೇರಿ ಜಂಟಿ ಸಂವಾದದಲ್ಲಿ ಭಾಗಿಯಾದರು.
ಇಬ್ಬರು ನಾಯಕರು ರಾಜ್ಯ ಹಾಗೂ ರಾಷ್ಟ್ರೀಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ಈ ಮೂಲಕ 40% ಸರ್ಕಾರಕ್ಕೆ ಅಂತ್ಯಹಾಡಿ ಎಂದು ಕರೆಕೊಟ್ಟರು. ಪುಲಕೇಶಿನಗರದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿಯವರಲ್ಲಿ ಎಷ್ಟು ದ್ವೇಷ ಇದೆಯೋ ಅದರ ನೂರುಪಟ್ಟು ಪ್ರೀತಿ ನಮ್ಮ ಹೃದಯದಲ್ಲಿದೆ. ದ್ವೇಷವನ್ನು ದ್ವೇಷದಿಂದ ತೆಗೆಯಲು ಸಾಧ್ಯವಿಲ್ಲ, ಪ್ರೀತಿಯಿಂದ ಮಾತ್ರ ಅದು ಸಾಧ್ಯ. ದ್ವೇಷದ ಮಾರುಕಟ್ಟೆಯಲ್ಲಿ ನಾವು ಪ್ರೀತಿಯ ಅಂಗಡಿ ತೆರೆಯುತ್ತೇವೆ ಎಂದರು.
ಬಿಜೆಪಿಯ ಹಿಂಸೆಯ ರಾಜಕಾರಣ ಮಣಿಪುರದಲ್ಲಿ ಗೊತ್ತಾಗ್ತಿದೆ. ಮಣಿಪುರ ಹೊತ್ತಿ ಉರಿಯುತ್ತಿದೆ. ಆದ್ರೆ ಪ್ರಧಾನಿ ಹಾಗೂ ಗೃಹ ಸಚಿವರು ಕರ್ನಾಟಕದ ಬೀದಿಗಳಲ್ಲಿ ಮತ ಕೇಳ್ತಿದ್ದಾರೆ. ಬಿಜೆಪಿ ಎಲ್ಲೆಲ್ಲಿ ಹೋಗುತ್ತದೋ ಅಲ್ಲೆಲ್ಲ ಜನರನ್ನು ಒಡೆಯುತ್ತದೆ, ದ್ವೇಷ ಹರಡ್ತಾರೆ. ಅವರ ಕೆಲಸ ದ್ವೇಷ ಹರಡುವುದು, ನಮ್ಮ ಕೆಲಸ ಜನರನ್ನು ಜೋಡಿಸುವುದು ಎಂದರು.