ಬೆಂಗಳೂರು :ಮಾಜಿ ಕ್ರಿಕೆಟಿಗ ದಿ ಗ್ರೇಟ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಇತ್ತೀಚೆಗೆ ಕಾಣಿಸಿಕೊಂಡ ಜಾಹೀರಾತು ಸದ್ಯ ಇಂಟರ್ನೆಟ್ನಲ್ಲಿ ಹೊಸ ಕ್ರೇಜ್ ಸೃಷ್ಟಿಸಿದೆ. ರಾಹುಲ್ ಹೇಳಿರುವ ಇಂದಿರಾನಗರದ ಗೂಂಡಾ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ಹಲ್ಚಲ್ ಸೃಷ್ಟಿಸಿದೆ.
ಸೂರತ್ ಟ್ರಾಫಿಕ್ ಪೊಲೀಸ ಪೋಸ್ಟ್ ಕೇವಲ ಸೌಮ್ಯ ಸ್ವಭಾವದ ರಾಹುಲ್ ಮಾತ್ರ ನೋಡಿದ್ದ ಮಂದಿಗೆ ರಾಹುಲ್ ಇನ್ನೊಂದು ಅವತಾರ ಅಚ್ಚರಿಗೆ ಕಾರಣವಾಗಿದೆ. ಕ್ರೆಡಿಟ್ ಕಾರ್ಡ್ ಜಾಹೀರಾತು ಇದೀಗ ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಜಾಲತಾಣದಲ್ಲಿ ಅವರದ್ದೇ ಮೀಮ್ಸ್ಗಳು ಹರಿದಾಡುತ್ತಿವೆ.
ರಾಹುಲ್ರ ಈ ವಿಡಿಯೋವನ್ನು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಹ ಶೇರ್ ಮಾಡಿದ್ದರು. ದ್ರಾವಿಡ್ರ ಇಂತಹ ರೂಪ ನಾನೆಂದೂ ನೋಡಿರಲಿಲ್ಲ ಅಂತ ಅವರು ಬರೆದುಕೊಂಡಿದ್ದರು. ಇವರಲ್ಲದೆ ವೆಂಕಟೇಶ್ ಪ್ರಸಾದ್ ಸೇರಿ ಹಲವರು ವಿಡಿಯೋ ಶೇರ್ ಮಾಡಿದ್ದರು.
ಆದ್ರೆ, ಈ ವಿಡಿಯೋದಿಂದ ಪ್ರೇರೇಪಿತರಾದ ಹಲವು ಮಂದಿ ತಮ್ಮದೇ ಮೀಮ್ಸ್ ಆಗಿ ಹರಿ ಬಿಡುತ್ತಿದ್ದಾರೆ. ಇನ್ನೂ ಕೆಲವರು ಇದನ್ನೇ ಮಾರ್ಕೆಟಿಂಗ್ ಆಗಿಯೂ ಬಳಸಿಕೊಂಡಿದ್ದಾರೆ. ಅದರಲ್ಲಿ ಆನ್ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮೆಟೋ ಮಾಡಿದ್ದ ಟ್ವೀಟ್ ಒಂದು ಪೊಲೀಸರು ಸಹ ಒಂದು ಕ್ಷಣ ದಂಗಾಗುವಂತೆ ಮಾಡಿತ್ತು.
ಇಂದಿರಾನಗರ ಮಾರ್ಗದಲ್ಲಿ ನಮ್ಮ ಫುಡ್ ಡೆಲಿವರಿ ತಡವಾಗಲಿದೆ. ಯಾಕೆಂದರೆ, ರಸ್ತೆ ಮಧ್ಯೆ ಸಿಟ್ಟಿಗೆದ್ದ ಗೂಂಡಾ ನಿಂತಿದ್ದಾನೆ ಅಂತ ಟ್ವೀಟ್ ಮಾಡಿತ್ತು. ಆದ್ರೆ, ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದಲ್ಲದೆ ಕೆಲವರು ನಿಜವಾಗಿಯೂ ರಸ್ತೆಯಲ್ಲಿ ರೌಡಿ ಇದ್ದಾನೆ ಅಂದುಕೊಂಡಿದ್ದರು.
ಅವಕ್ಕಾದ ಇಂದಿರಾನಗರ ಪೊಲೀಸರು :ಅಲ್ಲದೆ ಇದು ಇಂದಿರಾನಗರ ಪೊಲೀಸರ ಕಿವಿಗೂ ತಲುಪಿದೆ. ಆದರೆ, 3 ಗಂಟೆಯ ಬಳಿಕ ಜೊಮೆಟೋ ಇನ್ನೊಂದು ಟ್ವೀಟ್ ಮಾಡಿ ಇದಕ್ಕೆಲ್ಲ ಉತ್ತರ ನೀಡಿತ್ತು. ಕೆಲವರು ನಮ್ಮ ಟ್ವೀಟ್ ಸೀರಿಯಸ್ ಆಗಿ ತೆಗೆದುಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ, ರಸ್ತೆಯಲ್ಲಿ ಯಾವ ಗೂಂಡಾ ಸಹ ಇಲ್ಲ, ಅಲ್ಲಿ ದೊಡ್ಡ ವಾಲ್ ಇರಬಹುದು ಎಂದು ಹಾಸ್ಯ ಚಟಾಕಿ ಹಾರಿಸಿತ್ತು.
ಇದಷ್ಟೇ ಅಲ್ಲ, ಇದೇ ವಿಡಿಯೋದ ಫೋಟೊ ಬಳಸಿಕೊಂಡು ಸೂರತ್ ಟ್ರಾಫಿಕ್ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ಜನರಲ್ಲಿ ಜಾಗೃತಿಗೆ ಮುಂದಾಗಿದ್ದಾರೆ. ಇಂದಿರಾನಗರ ರಸ್ತೆಯಾಗಲಿ ಅಥವಾ ಸೂರತ್ನ ರಸ್ತೆ ಅಲ್ಲಿ ಗೂಂಡಾಗಿರಿ ಮಾಡೋದು ಸ್ವಾಗತವಲ್ಲ. #Saynotoroadrange ಅಂತ ಅಭಿಯಾನ ಆರಂಭಿಸಿದೆ.
ಇದೀಗ ಹಲವು ಪ್ರತಿಷ್ಠಿತ ಕಂಪನಿಗಳು, ಮುಂಬೈ ಮತ್ತು ಸೂರತ್ ಪೊಲೀಸರು ಸಹ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಡ್ರಾವಿಡ್ ಜಾಹೀರಾತಿನ ಫೋಟೊ ಬಳಸಿ ಸಾರ್ವಜನಿಕರಿಗೆ ತಿಳಿ ಹಾಸ್ಯದ ಮೂಲಕ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದಾರೆ.