ಬೆಂಗಳೂರು:ಕಾಂಗ್ರೆಸ್ನ ಯುವರಾಜ ರಾಹುಲ್ ಗಾಂಧಿ ನಡೆಸುತ್ತಿರುವ 'ಭಾರತ್ ಜೋಡೋ ಪಾದಯಾತ್ರೆ'ಯನ್ನ ರಾಜ್ಯ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಗೆ ಬೃಹತ್ ಪ್ರಚಾರದ ರ‍್ಯಾಲಿಯನ್ನಾಗಿ ಬಳಸಿಕೊಳ್ಳಲು ರಾಜಕೀಯವಾಗಿ ಕಾರ್ಯತಂತ್ರ ರೂಪಿಸಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗಿರುವ ಸಂದರ್ಭದಲ್ಲಿಯೇ ನಡೆಯುತ್ತಿರುವ ರಾಹುಲ್ ಗಾಂಧಿ ಸಾರಥ್ಯದ ಪಾದಯಾತ್ರೆಯನ್ನು ಪಕ್ಷದ ಸಂಘಟನೆ ಜೊತೆಗೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮೆಟ್ಟಿಲುಗಳನ್ನಾಗಿ ಮಾರ್ಪಡಿಸಲಾಗುತ್ತಿದೆ.
ಚಾಮರಾಗನಗರ ಜಿಲ್ಲೆಯ ಗಂಡ್ಲುಪೇಟೆ ವಿಧಾನಸಭೆ ಕ್ಷೇತ್ರಕ್ಕೆ ಸೆ.30ರಂದು ಪ್ರವೇಶಿಸಿರುವ ರಾಹುಲ್ ಗಾಂಧಿ ಪಾದಯಾತ್ರೆ ರಾಜ್ಯದಲ್ಲಿ ಒಟ್ಟು 21 ದಿನಗಳ ಕಾಲ ಸಂಚರಿಸಲಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಯಾತ್ರೆ 515 ಕಿ.ಮೀ ಸಾಗಲಿದೆ.
ಇದನ್ನೂ ಓದಿ:ಬಂಡೀಪುರ ಮೂಲಕ ರಾಜ್ಯಕ್ಕೆ ರಾಹುಲ್ ಎಂಟ್ರಿ: ರಾಜ್ಯ ಕಾಂಗ್ರೆಸ್ ನಾಯಕರಿಂದ ಸ್ವಾಗತ
ಸದ್ದಿಲ್ಲದೆ ನಡೆಯಲಿರುವ ಪಕ್ಷದ ಪರ ಪ್ರಚಾರ ಕಾರ್ಯ:'ಭಾರತ ಐಕ್ಯತಾ ಯಾತ್ರೆ'ಯಲ್ಲಿ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಪ್ರಮುಖ ಕಾಂಗ್ರೆಸ್ ಮುಖಂಡರು, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಸಂಸದರು ಮತ್ತು ಮಾಜಿ ಸಂಸದರು ರಾಹುಲ್ ಗಾಂಧಿ ಜತೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿ ದಿನ ಯಾತ್ರೆ ನಡೆಯುವಾಗ 10 ರಿಂದ 25 ವಿಧಾನಸಭೆ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರ ಜತೆ ರಾಹುಲ್ ಗಾಂಧಿ ನೇರವಾಗಿ ಸಂವಾದ, ಚರ್ಚೆ ನಡೆಸಲಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ನೀಡಿದ ಉತ್ತಮ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಪಕ್ಷದ ಪರ ಪ್ರಚಾರ ಕಾರ್ಯವೂ ಸದ್ದಿಲ್ಲದೆ ನಡೆಯಲಿದೆ.
ರಾಜ್ಯದಲ್ಲಿ 'ಭಾರತ ಐಕ್ಯತಾ ಯಾತ್ರೆ' ಸಾಗುವಾಗ ರಾಜ್ಯ ಮತ್ತು ಕೇಂದ್ರದಲ್ಲಿನ ಬಿಜೆಪಿ ಸರ್ಕಾರಗಳ ವೈಫಲ್ಯಗಳು, ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆ, ಕೋಮು ಸೌಹಾರ್ದಕ್ಕೆ ಧಕ್ಕೆ ತಂದಿರುವುದು ಸೇರಿ ಹಲವು ಸಂಗತಿಗಳನ್ನು ಜನತೆಗೆ ತಿಳಿಸಿ ಜಾಗೃತಿ ಮೂಡಿಸುವ ಉದ್ದೇಶವನ್ನೂ ಕಾಂಗ್ರೆಸ್ ಮುಖಂಡರು ಹೊಂದಿದ್ದಾರೆ. ಇದಕ್ಕಾಗಿ ಶಿಕ್ಷಕರು, ಕಲಾವಿದರು, ನ್ಯಾಯವಾದಿಗಳು, ಬರಹಗಾರರು, ಸಾಹಿತಿಗಳು, ಮಹಿಳೆಯರು, ಯುವಕರು ಮತ್ತು ವಿದ್ಯಾರ್ಥಿಗಳ ಜತೆ ರಾಹುಲ್ ಗಾಂಧಿ ಆಗಾಗ ಸಂವಾದ ನಡೆಸಲಿದ್ದಾರೆ.
ಗಾಂಧಿ ಜಯಂತಿಯಂದು ಮಹಾತ್ಮ ಗಾಂಧಿ ಭೇಟಿ ನೀಡಿದ ಹಾಗೂ ಖಾದಿ ಕೈಗಾರಿಕೆಗೆ ಹೆಸರಾದ ನಂಜನಗೂಡಿನ ಬದನವಾಳು ಗ್ರಾಮಕ್ಕೆ ರಾಹುಲ್ ಗಾಂಧಿ ಯಾತ್ರೆ ಭೇಟಿ ನೀಡಿದ್ದಾರೆ. ಮಂಡ್ಯದಲ್ಲಿ ನಡೆಯುವ ಮಹಿಳಾ ಸಮಾವೇಶದಲ್ಲಿ ರಾಹುಲ್ ಗಾಂಧಿಯವರ ಸಹೋದರಿ ಪ್ರಿಯಾಂಕ ಗಾಂಧಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಬಳ್ಳಾರಿಯಲ್ಲಿ ಯಾತ್ರೆಯ ಮುಕ್ತಾಯ ಸಮಾರಂಭ: ಬಳ್ಳಾರಿಯಲ್ಲಿ ನಡೆಯುವ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಎಐಸಿಸಿಯ ಎಲ್ಲಾ ಪ್ರಮುಖ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ಸಹ ಕಾಂಗ್ರೆಸ್ ಪಕ್ಷ ಬಳ್ಳಾರಿ ಪಾದಯಾತ್ರೆ ಕೈಗೊಂಡಿತ್ತು. ಅಲ್ಲಿ ಬೃಹತ್ ಸಮಾವೇಶ ನಡೆಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಈ ಬಾರಿಯ ಪಾದಯಾತ್ರೆಯಲ್ಲಿ ಕರ್ನಾಟಕ ರಾಜ್ಯದ ಯಾತ್ರೆಯ ಮುಕ್ತಾಯ ಸಮಾರಂಭವನ್ನು ಬಳ್ಳಾರಿಯಲ್ಲಿಯೇ ಆಯೋಜಿಸಿರುವುದು ವಿಶೇಷವಾಗಿದೆ.
ಬಿಜೆಪಿ ಸರ್ಕಾರವಿರುವ ರಾಜ್ಯದಲ್ಲಿ ರಾಹುಲ್ ಗಾಂಧಿ ಗಾಂಧಿ ನಡೆಸುತ್ತಿರುವ ಭಾರತ ಐಕ್ಯತಾ ಯಾತ್ರೆ ಕೇವಲ ಒಂದು ಪಾದಯಾತ್ರೆಯಾಗಿ ನಡೆಯುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಜನ ಜಾಗೃತಿ ಮೂಡಿಸಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ದೂರದೃಷ್ಟಿಯ ಚುನಾವಣೆ ರಾಜಕೀಯ ಉದ್ದೇಶದಿಂದ ಕೂಡಿದೆ ಎನ್ನಲಾಗಿದೆ.
ಇದನ್ನೂ ಓದಿ:ಅಂದು 'ಡಿಸ್ಕವರಿ ಇಂಡಿಯಾ ಇಂದು ಭಾರತ್ ಜೋಡೋ': ರಾಗಾ ಯಾತ್ರೆಗೆ ಗಡಿಜಿಲ್ಲೆಯಿಂದಲೇ ಶ್ರೀಕಾರ