ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಸಹ ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಮಾತ್ರ ಏರಿಕೆಯಾಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಮೂರನೇ ಅಲೆಯ ಆತಂಕ ಕೂಡ ಕಾಡುತ್ತಿದ್ದು, ಈ ಹಿನ್ನೆಲೆ ಪಾಲಿಕೆ ಹೆಚ್ಚಿನ ಸುರಕ್ಷತಾ ಕ್ರಮಗಳನ್ನ ತೆಗೆದುಕೊಳ್ಳಲು ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು, ಕೇರಳ ಹಾಗೂ ಮಹಾರಾಷ್ಟ್ರದಿಂದ ಬಂದವರಿಗೆ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯ. ಟೆಸ್ಟ್ ಇಲ್ಲದೇ ಬರುವವರು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಬೇಕು. ಈಗಾಗಲೇ ಕೇರಳ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲು ಶಿಫಾರಸು ಮಾಡಿದೆ. ಈ ಬಗ್ಗೆ ಬಿಬಿಎಂಪಿ, ಪೊಲೀಸ್ ಇಲಾಖೆ ಜಂಟಿ ಕಾರ್ಯಚರಣೆ ನಡೆಸಲಿದೆ. ವಲಯ ಮಟ್ಟದ ಅಧಿಕಾರಿಗಳಿಗೆ ಸಾಂಸ್ಥಿಕ ಕ್ವಾರಂಟೈನ್‌ಗೆ ಸೂಚನೆ ನೀಡಲಾಗಿದೆ. ಇಂದಿನಿಂದ ಕೇರಳ ಹಾಗೂ ಮಹಾರಾಷ್ಟ್ರದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ. ಇನ್ನು ಆರ್ಟಿಪಿಸಿಆರ್ ಟೆಸ್ಟ್ 24 ಗಂಟೆಯೊಳಗೆ ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ವೀಕೆಂಡ್ ಲಾಕ್ಡೌನ್ ಸಾಧ್ಯತೆ
ಬೆಂಗಳೂರಿನಲ್ಲಿ ಮತ್ತೆ ಹೆಮ್ಮಾರಿ ಕಾಟ ಹೆಚ್ಚಾಗುವ ಸಾಧ್ಯತೆ ಇದ್ದು, ವೀಕೆಂಡ್ ಲಾಕ್ ಬಗ್ಗೆ ಪಾಲಿಕೆ ಪ್ರಸ್ತಾಪ ವಿಚಾರವಾಗಿ ಮಾತನಾಡಿದ ಆಯುಕ್ತರು, ಸಾಮಾನ್ಯ ಜನ ಜೀವನ ನಡೆಸಬೇಕಾಗಿದೆ. ಸೋಂಕಿಗೆ ಪೂರ್ವ ಸಿದ್ಧತೆ ಆಗಬೇಕಾಗಿದೆ. ಸರ್ಕಾರದ ಹಂತದಲ್ಲಿ ಅಂತಿಮ ತೀರ್ಮಾನ ಆಗಲಿದೆ. ಸದ್ಯಕ್ಕೆ ಕೇಸ್ ಸಂಖ್ಯೆ 500ಕ್ಕಿಂತ ಕಡಿಮೆ ಇದೆ. ಕಂಟೇನ್ಮೆಂಟ್ ಮೆಂಟ್ ವಿಚಾರದಲ್ಲಿ ಕಠಿಣ ಕ್ರಮ ವಹಿಸಲಾಗಿದೆ ಎಂದು ಹೇಳುವ ಮೂಲಕ ವೀಕೆಂಡ್ ಲಾಕ್ ಡೌನ್ ಬಗ್ಗೆ ಆಯುಕ್ತರು ಸುಳಿವು ನೀಡಿದರು.