ಬೆಂಗಳೂರು:ನೂತನ ಸಾಲಿನ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಕಾಲೇಜಿನ ಏಳು ವಿಷಯಗಳ ಪಠ್ಯದಲ್ಲಿ ಅಲ್ಪ ಪ್ರಮಾಣದ ಕಡಿತ ಮಾಡಿದ್ದು, ಪರಿಷ್ಕೃತ ಪಠ್ಯದಂತೆ ಬೋಧನೆ ನಡೆಸಲಾಗುತ್ತದೆ. ಹಳೆ ಪಠ್ಯ ಪುಸ್ತಕದಲ್ಲಿನ ಅಲ್ಪ ಭಾಗ ಮಾತ್ರ ಕಡಿತ ಮಾಡಿದ್ದು, ಹೊಸದಾಗಿ ಏನೂ ಸೇರ್ಪಡೆ ಮಾಡಿಲ್ಲ. ಹಾಗಾಗಿ ಇರುವ ಪಠ್ಯ ಪುಸ್ತಕಗಳನ್ನೇ ಬಳಕೆ ಮಾಡಬಹುದಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಬಾರದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಮತ್ತು ಪ್ರಾಂತೀಯ ಸರ್ಕಾರಗಳಿಗೆ ಸಲಹೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ಥಾಪಿಸಿದ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು 2023-24ನೇ ಸಾಲಿನ ಪಠ್ಯ ವಸ್ತುವಿನಲ್ಲಿ ಕಡಿತ ಮಾಡಿದೆ. ಈ ಪರಿಷತ್ತು ಅಳವಡಿಸಿಕೊಂಡ ವಿಜ್ಞಾನ ಸಂಯೋಜನೆಯಲ್ಲಿನ ಪಿಸಿಎಂಬಿ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ) ಹಾಗೂ ವಾಣಿಜ್ಯ ವಿಷಯದ ಲೆಕ್ಕಶಾಸ್ತ್ರ ವ್ಯವಹಾರ ಅಧ್ಯಯನ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಕಡಿತ ಮಾಡಲಾಗಿದೆ. ಇದನ್ನು ರಾಜ್ಯ ಕೂಡ ಅನುಸರಿಸಲಿದ್ದು, ಈ ಎಲ್ಲ ಏಳು ವಿಷಯಗಳಲ್ಲಿ ಸ್ವಲ್ಪ ಪ್ರಮಾಣದ ಪಠ್ಯ ಕಡಿತವಾಗಿದೆ. ಆದ್ದರಿಂದ 2023-24ನೇ ಸಾಲಿಗೆ ಏಳು ವಿಷಯಗಳ ಪರಿಷ್ಕೃತ ಪಠ್ಯ ವಸ್ತುವನ್ನು ಪರಿಗಣಿಸಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
ಪರಿಷ್ಕೃತ ಪಠ್ಯ ವಸ್ತುವನ್ನು ಆಧರಿಸಿದ ಪಠ್ಯ ಪುಸ್ತಕವನ್ನು ಬಳಸಲಾಗುತ್ತದೆ. ಆದರೆ, ವಿದ್ಯಾರ್ಥಿಗಳು ಈಗಾಗಲೇ ಪಠ್ಯ ಪುಸ್ತಕಗಳನ್ನು ಖರೀದಿಸಿದ್ದರೆ, ಕಡಿತಗೊಳಿಸಲಾಗಿರುವ ಪಠ್ಯ ವಸ್ತುವಿನ ಅಂಶಗಳು, ಅಧ್ಯಾಯಗಳನ್ನು ಹೊರತುಪಡಿಸಿ ಬಳಕೆ ಮಾಡಬಹುದಾಗಿರುತ್ತದೆ. ಜೊತೆಗೆ ಕಡಿತವಾಗಿರುವ ಪಠ್ಯ ವಸ್ತುವನ್ನು ಇಲಾಖೆಯ ಜಾಲತಾಣದಲ್ಲಿ ಅಳವಡಿಸಲಾಗುತ್ತದೆ. ಯಾವುದೇ ಕಾರಣದಿಂದ ವಿದ್ಯಾರ್ಥಿಗಳು ವಿನಾ ಕಾರಣ ಗೊಂದಲಕ್ಕೆ ಒಳಗಾಗಬಾರದು ಎಂದು ನಿರ್ದೇಶಕರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.