ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ ತಮ್ಮ ಸಮಸ್ಯೆಗಳನ್ನು ಪ್ರಸ್ತಾಪಿಸಿ ನ್ಯಾಯ ಒದಗಿಸುವ ಹೋರಾಟ ನಡೆಸಿ ಎಂದು ಪಿಎಸ್ಐ ಪರೀಕ್ಷೆ ಬರೆದ ಅಭ್ಯರ್ಥಿಗಳು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ನಿನ್ನೆ ರಾತ್ರಿ ಶಿವಾನಂದ ವೃತ್ತ ಸಮೀಪ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಆಗಮಿಸಿದ 100 ಕ್ಕೂ ಹೆಚ್ಚು ಪಿಎಸ್ಐ ಅಭ್ಯರ್ಥಿಗಳು ತಮ್ಮ ಪರ ಸದನದಲ್ಲಿ ಹೋರಾಟ ನಡೆಸುವಂತೆ ಕೋರಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡು ನಿವಾಸಕ್ಕೆ ವಾಪಸ್ ಆಗಿದ್ದ ಸಿದ್ದರಾಮಯ್ಯ ಅವರಿಗೋಸ್ಕರ ಅವರ ನಿವಾಸದ ಎದುರು ಒಂದು ಗಂಟೆಗೂ ಹೆಚ್ಚು ಕಾಲ ಕಾದ ಅಭ್ಯರ್ಥಿಗಳನ್ನು ಕೊನೆಗೂ ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡಿದ್ದು, ಸುದೀರ್ಘ ಚರ್ಚೆ ನಡೆಸಿದ್ದಾರೆ. ಅಭ್ಯರ್ಥಿಗಳ ಸಮಸ್ಯೆಯನ್ನು ಆಲಿಸಿದ ಅವರು ಕೆಲವರಿಂದ ನಡೆದಿರುವ ಅಕ್ರಮದಿಂದಾಗಿ ಸಾಕಷ್ಟು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ನೂರಾರು ಮಂದಿಗೆ ಅನ್ಯಾಯ ಆಗಿರುವುದು ತಮ್ಮ ಗಮನಕ್ಕೂ ಬಂದಿದೆ. ತಮ್ಮೆಲ್ಲರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತಾವು ಸದನದಲ್ಲಿ ಪ್ರಸ್ತಾಪಿಸಿ ಹೋರಾಟ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ರಾತ್ರಿಯವರೆಗೂ ಸಿದ್ದರಾಮಯ್ಯ ನಿವಾಸದ ಬಳಿ ಇದ್ದ ಪಿಎಸ್ಐ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಸದನದಲ್ಲಿ ತಮ್ಮ ವಿಚಾರ ಪ್ರಸ್ತಾಪವಾಗಿ ಸಮಸ್ಯೆ ನಿವಾರಣೆಯಾಗಬಹುದು ಎಂಬ ವಿಶ್ವಾಸದೊಂದಿಗೆ ತೆರಳಿದ್ದಾರೆ.