ಬೆಂಗಳೂರು: ನಗರದ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಸಂದೇಶ ರವಾನಿಸಿದ್ದ ಖದೀಮನ ಬಗ್ಗೆ ಸುಳಿವುದು ಸಿಕ್ಕಿರುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.
ಬುಧವಾರ ರಾತ್ರಿ ಸುಮಾರು 11.30ಕ್ಕೆ ಬಾಂಬ್ ಇಟ್ಟಿರುವುದಾಗಿ ಐಟಿ ಕಚೇರಿಯ ಹಿರಿಯ ಅಧಿಕಾರಿಗಳಿಗೆ ಇ-ಮೇಲ್ ಬಂದಿತ್ತು. ಕೂಡಲೇ ಜಾಗೃತರಾಗಿ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ತಂಡಗಳಿಂದ ರಾತ್ರಿಯೆಲ್ಲ ಶೋಧ ನಡೆಸಿದ್ದೇವೆ. ಆರೋಪಿಯ ಇ-ಮೇಲ್ ವಿಳಾಸ ಹಾಗೂ ಆತ ಎಲ್ಲಿಂದ ಇ-ಮೇಲ್ ಮಾಡಿದ್ದಾನೆ, ಎಲ್ಲಿ ಕೆಲಸ ಮಾಡುತ್ತಾನೆ ಎಂಬುದರ ಬಗ್ಗೆ ಪೊಲೀಸರು ವೈಜ್ಞಾನಿಕವಾಗಿ ಪತ್ತೆ ಹಚ್ಚಿದ್ದಾರೆ. ಜೆ.ಪಿ.ನಗರದಿಂದ ಹುಸಿ ಬಾಂಬ್ ಸಂದೇಶ ರವಾನಿಸಿದ್ದಾನೆ ಎಂದು ಗೊತ್ತಾಗಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.