ಬೆಂಗಳೂರು:ಕೊರೊನಾ ಪರಿಣಾಮವಾಗಿ ಕಂಟೇನ್‍ಮೆಂಟ್ ವಲಯ ಹಾಗೂ ಸೀಲ್‍ಡೌನ್ ಪ್ರದೇಶಗಳಲ್ಲಿ ಅವಶ್ಯಕತೆ ಇರುವ ಜನರಿಗೆ ಆಹಾರ ಪದಾರ್ಥ ಮತ್ತಿತರ ಅಗತ್ಯ ದಿನಬಳಕೆ ವಸ್ತುಗಳನ್ನು ಪೂರೈಸುವುದು ಬಿಬಿಎಂಪಿ ಜವಾಬ್ದಾರಿ ಎಂದು ಹೈಕೋರ್ಟ್ ಪಾಲಿಕೆಗೆ ತಾಕೀತು ಮಾಡಿದೆ.
ಕೊರೊನಾ ಕುರಿತಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ಒಂದೊಮ್ಮೆ ಈ ಜವಾಬ್ದಾರಿ ನಿರ್ವಹಿಸುವಲ್ಲಿ ಪಾಲಿಕೆ ವಿಫಲವಾದರೆ ಸಂವಿಧಾನದ ಕಲಂ 21ರ ಮೂಲ ಹಕ್ಕಗಳ ಪ್ರಕಾರ ಜನರು ಬಿಬಿಎಂಪಿಯಿಂದ ಪರಿಹಾರ ಕೇಳುವ ಹಕ್ಕು ಪಡೆದಿರುತ್ತಾರೆ ಎಂಬ ಎಚ್ಚರಿಕೆಯನ್ನೂ ನೀಡಿದೆ.
ಅಲ್ಲದೇ, ಅಗತ್ಯ ವಸ್ತುಗಳ ಕೊರತೆಯಿಂದ ಜನರು ಸಮಸ್ಯೆಗೆ ಸಿಲುಕಿದರೆ ದೂರು ನೀಡಲು ವ್ಯವಸ್ಥೆ ಮಾಡುವಂತೆ ಬಿಬಿಎಂಪಿಗೆ ಸೂಚಿಸಿದೆ. ಇದಕ್ಕೂ ಮುನ್ನ ನಡೆದ ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ವಾದಿಸಿ, ಬೆಂಗಳೂರಿನಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಕೇಂದ್ರ ಸರ್ಕಾರದ ನಿಯಮಗಳಂತೆ ಸೀಲ್‍ಡೌನ್ ಪ್ರದೇಶಗಳ ನಿವಾಸಿಗಳು ತಮ್ಮ ಮನೆಗಳಿಂದ ಹೊರ ಬರುವಂತಿಲ್ಲ. ಇದರಿಂದಾಗಿ ದೈನಂದಿನ ಜೀವನಾವಶ್ಯಕ ವಸ್ತುಗಳ ಖರೀದಿಗೂ ಸಮಸ್ಯೆ ಆಗುವುದರಿಂದ ಅಗತ್ಯ ವಸ್ತುಗಳನ್ನು ಸರ್ಕಾರವೇ ಮನೆ ಬಾಗಿಲಿಗೆ ಪೂರೈಸಬೇಕು. ಈ ನಿಟ್ಟಿನಲ್ಲಿ ಬಿಬಿಎಂಪಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿದರು.
ಇದಕ್ಕೆ ಆಕ್ಷೇಪಿಸಿದ ಬಿಬಿಎಂಪಿ ಪರ ವಕೀಲರು, ನಗರದಲ್ಲಿ 400ಕ್ಕೂ ಹೆಚ್ಚು ಕಂಟೇನ್‍ಮೆಂಟ್ ವಲಯಗಳಿವೆ. ಇಷ್ಟೊಂದು ದೊಡ್ಡ ಸಂಖ್ಯೆ ಪ್ರದೇಶಗಳಗೆ ರೇಷನ್ ಕಿಟ್, ಫುಡ್ ಕಿಟ್ ವಿತರಿಸುವುದು ಕಷ್ಟದ ಕೆಲಸ. ಅಷ್ಟಕ್ಕೂ ಫುಡ್ ಕಿಟ್, ರೇಷನ್ ಕಿಟ್ ಉಚಿತವಾಗಿ ಹಂಚುವುದು ಬಿಬಿಎಂಪಿಗೆ ಸಾಧ್ಯವಿಲ್ಲ. ಸರ್ಕಾರ ಆಹಾರ ಧಾನ್ಯಗಳನ್ನು ನೀಡಿದರೆ ಅದನ್ನು ತಲುಪಿಸಲು ಪಾಲಿಕೆ ಸಹಾಯ ಮಾಡಬಹುದು ಎಂದರು.
ಪಾಲಿಕೆ ಪರ ವಕೀಲರ ಹೇಳಿಕೆ ಒಪ್ಪದ ಪೀಠ, ಕಳೆದ ಏ.19ರಂದು ಬಿಬಿಎಂಪಿ ಹೊರಡಿಸಿರುವ ಆದೇಶದಲ್ಲಿ ಅಗತ್ಯ ವಸ್ತುಗಳನ್ನು ಮನೆ ತಲುಪಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ ಕಂಟೇನ್ಮೆಂಟ್ ಮತ್ತು ಸೀಲ್‍ಡೌನ್ ಪ್ರದೇಶಗಳಲ್ಲಿ ಅಗತ್ಯವಿರುವ ಜನರಿಗೆ ಆಹಾರ ಪೂರೈಸುವುದು ಪಾಲಿಕೆ ಕರ್ತವ್ಯ ಎಂದು ತಾಕೀತು ಮಾಡಿತು.