ಬೆಂಗಳೂರು: ನಾಡ ಹಬ್ಬ ದಸರಾ ಅಂಗವಾಗಿ ನೈರುತ್ಯ ರೈಲ್ವೆ ವತಿಯಿಂದ ವಿಶೇಷ ರೈಲು ಸೇವೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಮೈಸೂರು-ವಿಜಯಪುರ-ಮೈಸೂರು ನಡುವೆ ದಸರಾ ಅಂಗವಾಗಿ ವಿಶೇಷ ರೈಲು ಸೇವೆ ಕಲ್ಪಿಸಲಾಗಿದೆ. ಅಕ್ಟೋಬರ್ 4ರಂದು ಮೈಸೂರಿನಿಂದ ಮಧ್ಯಾಹ್ನ 12-50ಕ್ಕೆ ಹೊರಡಲಿರುವ ರೈಲು ಮರು ದಿನ ಬೆಳಗ್ಗೆ 9-55ಕ್ಕೆ ವಿಜಯಪುರ ತಲುಪಲಿದೆ. ತುಮಕೂರು-ಚಿತ್ರದುರ್ಗ-ಹೊಸಪೇಟೆ-ಬಾದಾಮಿ-ಆಲಮಟ್ಟಿ ಮಾರ್ಗವಾಗಿ ಸಂಚರಿಸಲಿರುವ ರೈಲು ಅದೇ ಮಾರ್ಗದಲ್ಲಿ ಅಕ್ಟೋಬರ್ 8ರಂದು ಸಂಜೆ ಆರು ಗಂಟೆಗೆ ವಿಜಯಪುರದಿಂದ ಹೊರಟು ಮರು ದಿನ ಮಧ್ಯಾಹ್ನ 1:05ಕ್ಕೆ ಮೈಸೂರು ತಲುಪಲಿದೆ.
ರೈಲು ಸಂಖ್ಯೆ 82661 ಯಲಹಂಕ- ಕಲಬುರಗಿ ಮಾರ್ಗದ ನಡುವೆ ಸುವಿಧಾ ವಿಶೇಷ ರೈಲು ಸೇವೆ ಕಲ್ಪಿಸಿದ್ದು, ಅಕ್ಟೋಬರ್ 4 ಮತ್ತು 7ರಂದು ಯಲಹಂಕದಿಂದ ಕಲಬುರಗಿಗೆ ಗೌರಿಬಿದನೂರು, ಹಿಂದೂಪುರ, ಧರ್ಮವರಂ, ಅನಂತಪುರ, ಗುಂಟ್ಕಲ್, ಮಂತ್ರಾಲಯ, ರಾಯಚೂರು, ಯಾದಗಿರಿ ಮಾರ್ಗದ ಮೂಲಕ ಸಂಚರಿಸಲಿದೆ. ಅದೇ ಮಾರ್ಗದ ಮೂಲಕ ರೈಲು ಕಲಬುರಗಿಯಿಂದ ಅಕ್ಟೋಬರ್ 5 ಮತ್ತು 8ರಂದು ಯಲಹಂಕಕ್ಕೆ ಸೇವೆ ನೀಡಲಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ-ಮಂಗಳೂರು ನಡುವಿನ ರೈಲು ಸಂಚಾರವನ್ನ ಕಾರವಾರದವರೆಗೆ ವಿಸ್ತರಣೆ ಮಾಡಲಾಗಿದೆ. ಅಕ್ಟೋಬರ್ 4ರಂದು ರಾತ್ರಿ 10:20ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಸುವಿಧಾ ಸಂಚರಿಸಲಿದ್ದು, ಸುಬ್ರಹ್ಮಣ್ಯ, ಮಂಗಳೂರು, ಮುರುಡೇಶ್ವರ ಮಾರ್ಗವಾಗಿ ಮರುದಿನ ಮಧ್ಯಾಹ್ನ 2:30ಕ್ಕೆ ಕಾರವಾರ ತಲುಪಲಿದೆ. ಅದೇ ಮಾರ್ಗವಾಗಿ ಅಕ್ಟೋಬರ್ 8ರಂದು ಸಂಜೆ 5:15ಕ್ಕೆ ಕಾರವಾರದಿಂದ ಹೊರಡಲಿರುವ ರೈಲು ಮರು ದಿನ ಬೆಳಗ್ಗೆ 8 ಗಂಟೆಗೆ ಯಶವಂತಪುರ ನಿಲ್ದಾಣ ತಲುಪಲಿದೆ.
ಅದೇ ರೀತಿ ರಾಜ್ಯದ ಇತರೆ ಭಾಗದಿಂದ ರೈಲು ಮೂಲಕ ಮೈಸೂರು ತಲುಪಲು ಸುವಿಧಾ ಸೇವೆಗಳನ್ನ ಒದಗಿಸಲು ನೈರುತ್ಯ ರೈಲ್ವೆ ಮುಂದಾಗಿದೆ. ಕೆಲವು ಮಾರ್ಗದಲ್ಲಿ ವಿಶೇಷ ರೈಲು ಕಲ್ಪಿಸಿದ್ದರೆ, ಮತ್ತೆ ಕೆಲವು ಕಡೆ ಮಾರ್ಗವನ್ನು ವಿಸ್ತರಿಸಲಾಗಿದೆ.