ಕರ್ನಾಟಕ

karnataka

By

Published : Jun 17, 2019, 1:55 PM IST

Updated : Jun 17, 2019, 3:40 PM IST

ETV Bharat / state

ವೈದ್ಯರ ಮೇಲಿನ ಹಲ್ಲೆಗೆ ವ್ಯಾಪಕ ಖಂಡನೆ... ರಾಜ್ಯದಲ್ಲೂ ಹಲವೆಡೆ ಪ್ರತಿಭಟನೆ

ಪಶ್ಚಿಮ ಬಂಗಾಳದ ಕರ್ತವ್ಯನಿರತ ಕಿರಿಯ ವೈದ್ಯೆ ಪರಿಭಾ ಮುಖರ್ಜಿ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆ (IMA) ಇಂದು ದೇಶಾದ್ಯಂತ ಕರೆ ನೀಡಿರುವ ಪ್ರತಿಭಟನೆಗೆ ರಾಜ್ಯದ ಹಲವೆಡೆ ಬೆಂಬಲ ವ್ಯಕ್ತವಾಗಿದೆ.

ತೀವ್ರಗೊಂಡ ವೈದ್ಯರ ಮುಷ್ಕರ

ಬೆಂಗಳೂರು: ಪಶ್ಚಿಮ ಬಂಗಾಳದ ಕರ್ತವ್ಯನಿರತ ಕಿರಿಯ ವೈದ್ಯೆ ಪರಿಭಾ ಮುಖರ್ಜಿ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆ (IMA) ಇಂದು ದೇಶಾದ್ಯಂತ ಕರೆ ನೀಡಿರುವ ಪ್ರತಿಭಟನೆಗೆ ರಾಜ್ಯದ ಹಲವೆಡೆ ಬೆಂಬಲ ವ್ಯಕ್ತವಾಗಿದೆ.

ಪ.ಬಂಗಾಳ ವೈದ್ಯೆ ಮೇಲಿನ ಹಲ್ಲೆಗೆ ರಾಜ್ಯಾದ್ಯಂತ ಆಕ್ರೋಶ, ಮುಷ್ಕರಕ್ಕೆ ಬೆಂಬಲ

ಐಎಂಎನಿಂದ ಕರೆ ನೀಡಿರುವ ಬಂದ್ ಬಿಸಿ ಹುಬ್ಬಳ್ಳಿಯಲ್ಲೂ ರೋಗಿಗಳಿಗೂ ತಟ್ಟಿದೆ. ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಓಪಿಡಿ ತೆರೆಯದೇ ಸಾವಿರಾರು ವೈದ್ಯರು ಮೌನ ಪ್ರತಿಭಟನೆ ನಡೆಸಿದರು. ಆಸ್ಪತ್ರೆ ಎದುರು ಹೊರ ರೋಗಿಗಳನ್ನ ನೋಡುವುದಿಲ್ಲ ಎಂಬ ಫಲಕ ಹಾಕಲಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ‌ ತುರ್ತು ಚಿಕಿತ್ಸೆ ಹೊರತುಪಡಿಸಿ ಮತ್ತಾವುದೇ ವೈದ್ಯಕೀಯ ಸೇವೆ ಸಿಗುತ್ತಿಲ್ಲ.

ಇನ್ನು ಗದಗದಲ್ಲಿ ಬಂದ್​ ಬಿಸಿ ಜೋರಾಗೇ ಇದ್ದು, ಮುಷ್ಕರದ ವಿಚಾರ ಗೊತ್ತಿಲ್ಲದೆ ಮಗುವಿನ ಚಿಕಿತ್ಸೆಗಾಗಿ ಬಂದಿದ್ದ ದಂಪತಿ ಪರದಾಡುವಂತಾಗಿತ್ತು. ಮಗು ಜ್ವರದಿಂದ ಬಳಲುತ್ತಿದ್ದು, ವೈದ್ಯರ ಮುಷ್ಕರ ಹಿನ್ನೆಲೆ ಚಿಕಿತ್ಸೆ ಸಾದ್ಯವಾಗಿಲ್ಲ. ಕೊನೆಗೆ ದಿಕ್ಕು ತೋಚದ ದಂಪತಿ ವಾಪಸ್ ತೆರಳಿದ್ರು.

ಶಿವಮೊಗ್ಗ ಜಿಲ್ಲೆಯ ಸುಮಾರು 600 ಕ್ಲಿನಿಕ್ ಹಾಗೂ‌ ಆಸ್ಪತ್ರೆಗಳು ಇಂದು ತಮ್ಮ ಸೇವೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿವೆ. ಹಲ್ಲೆ ನಡೆಸಿದವರ ಮೇಲೆ ಕಠಿಣ ಕಾನೂನಿನ ಕ್ರಮ ಜರುಗಿಸಬೇಕಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ನಾಳೆ ಬೆಳಗ್ಗೆ 6 ಗಂಟೆ ತನಕ ಖಾಸಗಿ‌ ಆಸ್ಪತ್ರೆಗಳ ಓಪಿಡಿ ಬಂದ್ ಇರಲಿವೆ.

ಹಾವೇರಿಯಲ್ಲೂ ವೈದ್ಯೆ ಮೇಲಿನ ಹಲ್ಲೆ ವಿರೋಧಿಸಿ ಜಿಲ್ಲೆಯ ವೈದ್ಯರು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚು ರೋಗಿಗಳು ಬರುವ ಸಾಧ್ಯತೆ ಇದ್ದು, ಹೊರ ರೋಗಿಗಳಿಗೆ ಸೇವೆ ನೀಡಲು ಜಿಲ್ಲಾಸ್ಪತ್ರೆಯ ಸಿಬ್ಬಂದಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಧಾರವಾಡದ ಖಾಸಗಿ ಆಸ್ಪತ್ರೆಗಳಿಂದ ಒಂದು ದಿನದ ಮುಷ್ಕರಕ್ಕೆ ಬೆಂಬಲ‌ ನೀಡಿದ್ದು, ಧಾರವಾಡದ 10 ಆಸ್ಪತ್ರೆ ಮತ್ತು 40ಕ್ಕೂ ಹೆಚ್ಚು ಕ್ಲಿನಿಕ್​ಗಳನ್ನು ಬಂದ್ ಮಾಡಿ ಬೆಂಬಲ‌ ಸೂಚಿಸಲಾಗಿದೆ. ಇಲ್ಲಿ ರಜೆ ಎಂದು ಬೋರ್ಡ್ ಹಾಕಿ ಮುಷ್ಕರಕ್ಕೆ ಬೆಂಬಲ‌ ವ್ಯಕ್ತಪಡಿಸಿದ್ದಾರೆ.

ಕೊಪ್ಪಳಜಿಲ್ಲೆಯಲ್ಲಿ‌ರುವ ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಇಂದು ಬಂದ್ ಮಾಡುವ ಮೂಲಕ ವೈದ್ಯರು ಘಟನೆಯನ್ನು ಖಂಡಿಸಿದ್ದಾರೆ. ಕೇವಲ ತುರ್ತು ಸೇವೆಗಳು ಲಭ್ಯವಿರಲಿವೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನಡೆಯುತ್ತಿರುವ ಮುಷ್ಕರಕ್ಕೆ ಮಂಡ್ಯದಲ್ಲಿ ಜಿಲ್ಲಾ ಖಾಸಗಿ ಹಾಗೂ ಸರ್ಕಾರಿ ವೈದ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ವೈದ್ಯರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ರೋಗಿಗಳಿಗೆ ತೊಂದರೆಯಾಗಬಾರದೆಂಬ ಕಾರಣದಿಂದ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ಬೆಂಬಲ ಘೋಷಣೆ ಮಾಡಿದ್ದಾರೆ.

ತುಮಕೂರಿನಲ್ಲಿಯೂ ಓಪಿಡಿಗಳನ್ನು ಬಂದ್ ಮಾಡಿ ವೈದ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಗರದ ಬಹುತೇಕ ಖಾಸಗಿ ನರ್ಸಿಂಗ್ ಹೋಮ್​ಗಳಲ್ಲಿಯೂ ವೈದ್ಯರು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ.

ದೇಶಾದ್ಯಂತ ಕರೆ ನೀಡಿರುವ ಪ್ರತಿಭಟನೆಗೆ ಕಲಬುರಗಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿಗಳು ಯಥಾವತ್ತಾಗಿ ಕಾರ್ಯನಿರ್ವಹಿಸುತ್ತಿವೆ. 24 ಗಂಟೆಗಳ ಕಾಲ ಓಪಿಡಿ ಬಂದ್ ಮಾಡಿ ಪ್ರತಿಭಟನೆ ಮಾಡಲು ಐಎಂಎ ಕರೆ ನೀಡಿದರೂ ಕಲಬುರಗಿ ಜಿಲ್ಲೆಯ ವೈದ್ಯರಿಗೆ ಯಾವುದೇ ಮಾಹಿತಿ ನೀಡದಿರುವುದರಿಂದ ಖಾಸಗಿ ಆಸ್ಪತ್ರೆ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲೂ ಖಾಸಗಿ ಆಸ್ಪತ್ರೆ ವೈದ್ಯರು ಮುಷ್ಕರದಲ್ಲಿ ಭಾಗಿಯಾಗಿದ್ದು, ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾ ವೈದ್ಯಾಧಿಕಾರಿ ಎಚ್ಚರಿಕೆ ವಹಿಸಿದ್ದಾರೆ.

Last Updated : Jun 17, 2019, 3:40 PM IST

For All Latest Updates

TAGGED:

ABOUT THE AUTHOR

...view details