ಬೆಂಗಳೂರು: ತಮ್ಮ ಪತ್ನಿ ಮಾದಕ ವ್ಯಸನಿ, ಮಾದಕ ವಸ್ತು ಸರಬರಾಜುಗಾರನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ಸ್ಯಾಂಡಲ್ವುಡ್ ನಟ ಹಾಗೂ ನಿರ್ಮಾಪಕರೊಬ್ಬರು ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. 'ಹೀಗೊಂದು ದಿನ' ಹಾಗೂ 'ಅಪ್ಪುಗೆ' ಎಂಬ ಸಿನಿಮಾಗಳಿಗೆ ಬಂಡವಾಳ ಹೂಡಿದ್ದ ಟಿ ಚಂದ್ರಶೇಖರ್ ತಮ್ಮ ಪತ್ನಿ ನಮಿತಾ ಮತ್ತು ಲಕ್ಷ್ಮೀಶ್ ಪ್ರಭು ಎಂಬುವರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪವೇನು..?:ಎರಡು ವರ್ಷಗಳ ಹಿಂದೆ ಚಂದ್ರಶೇಖರ್ ಹಾಗೂ ನಮಿತಾ ವಿವಾಹವಾಗಿದ್ದು, ಬನಶಂಕರಿ ಎರಡನೇ ಹಂತದ ಚೆನ್ನಮ್ಮಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ತನ್ನ ಪತ್ನಿ ಮಾದಕ ವ್ಯಸನಿಯಾಗಿದ್ದು, ಬುದ್ಧಿವಾದ ಹೇಳಿದರೂ ಸಹ ಕದ್ದುಮುಚ್ಚಿ ಮಾದಕ ಪದಾರ್ಥ ಸೇವಿಸುವ ಅಭ್ಯಾಸ ಹೊಂದಿದ್ದಾಳೆ. ಈ ಜನವರಿಯಿಂದ ಆಕೆಗೆ ಲಕ್ಷ್ಮೀಶ್ ಪ್ರಭು ಎಂಬ ಡ್ರಗ್ ಪೆಡ್ಲರ್ ಜೊತೆ ಅನೈತಿಕ ಸಂಬಂಧವಿದೆ. ಮನೆಯಲ್ಲಿ ಪತ್ನಿ ಹಾಗೂ ಲಕ್ಷ್ಮೀಶ್ ದೈಹಿಕ ಸಂಪರ್ಕದಲ್ಲಿದ್ದ ವೇಳೆ ನೋಡಿ ಪ್ರಶ್ನಿಸಿದಾಗ ಇಬ್ಬರೂ ಸೇರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಟ, ನಿರ್ಮಾಪಕ ಚಂದ್ರಶೇಖರ್ ಆರೋಪಿಸಿದ್ದಾರೆ.