ಕರ್ನಾಟಕ

karnataka

ETV Bharat / state

ಪಾಸಿಟಿವಿಟಿ ರೇಟ್​ ಆಧರಿಸಿ ಅನ್​ಲಾಕ್​ಗೆ​ ಕ್ರಮ: ಡಿಸಿಎಂ ಅಶ್ವತ್ಥನಾರಾಯಣ

ನಾಳೆ ಅಥವಾ ನಾಡಿದ್ದು ಸಿಎಂ ಜೊತೆ ಅನ್​ಲಾಕ್​ ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಸಲಾಗುವುದು. ನಗರಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕೆಲಸದ ಕಾರಣ ಬರುತ್ತಿದ್ದಾರೆ. ಆದರೆ, ಅದಕ್ಕೆ ನಿರ್ಬಂಧ ಮಾಡಲು ಸಾಧ್ಯವಿಲ್ಲ. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸ್ಕ್ರೀನಿಂಗ್ ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ್​ ತಿಳಿಸಿದ್ದಾರೆ.

DCM Ashwathth
ಉಪಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ್​

By

Published : Jun 16, 2021, 7:11 PM IST

ಬೆಂಗಳೂರು: ವಿವಿಧ ವಲಯಗಳಿಂದ ಅನ್​ಲಾಕ್ ಮಾಡುವಂತೆ ಒತ್ತಾಯಗಳು ಬರುತ್ತಿದೆ. ಕೊರೊನಾ ಪಾಸಿಟಿವಿಟಿ ದರ, ಜನರ ಆರೋಗ್ಯದ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ್​ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಹಾಗೂ ಬೃಹತ್‌ ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ನಂತರ ಅವರು ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.

ತಾಂತ್ರಿಕ ಸಲಹಾ ಸಮಿತಿ ವರದಿ ಆಧರಿಸಿ ಕ್ರಮಕೈಗೊಳ್ಳಲಾಗುವುದು. ನಾಳೆ ಅಥವಾ ನಾಡಿದ್ದು ಸಿಎಂ ಜೊತೆ ಈ ಬಗ್ಗೆ ಚರ್ಚೆ ನಡೆಸಲಾಗುವುದು. ನಗರಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕೆಲಸದ ಕಾರಣ ಬರುತ್ತಿದ್ದಾರೆ. ಆದರೆ, ಅದಕ್ಕೆ ನಿರ್ಬಂಧ ಮಾಡಲು ಸಾಧ್ಯವಿಲ್ಲ. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸ್ಕ್ರೀನಿಂಗ್ ನಡೆಸಲಾಗುತ್ತಿದೆ ಎಂದು ಹೇಳಿದರು.

45 ವರ್ಷ ಮೇಲ್ಪಟ್ಟವರಿಗೆ ನಿರಂತರವಾಗಿ ಲಸಿಕೆ ಹಾಕಲಾಗುತ್ತಿದೆ. ಇದುವರೆಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 63 ರಷ್ಟು ಲಸಿಕೆ ಹಾಕಲಾಗಿದೆ. ಈ ತಿಂಗಳೊಳಗೆ ಶೇ 80 ರಷ್ಟು ಗುರಿ ಹೊಂದಲಾಗಿದೆ. ಶಿಬಿರಗಳನ್ನು ನಡೆಸುವ ಮೂಲಕ ಲಸಿಕೆ ಹಾಕಿಸಲಾಗುತ್ತಿದೆ. ಪ್ರತಿ ಮನೆ‌ ಮನೆಗೂ ತೆರಳಿ ಲಸಿಕೆ ಹಾಕಿಸುವ ಕಾರ್ಯ ನಡೆಯುತ್ತಿದೆ. ವೆಂಟಿಲೇಟರ್, ಆಕ್ಸಿಜನ್, ಬೆಡ್ ಬಗ್ಗೆ ಸವಾಲುಗಳನ್ನು ಎದುರಿಸಿದ್ದೇವೆ. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದ್ದಾರೆ. ಹಾಗಾಗಿ ಜನರ ಆರೋಗ್ಯದ ಕಡೆ ಗಮನಹರಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಸೌಕರ್ಯದ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದರು.

ಬೆಂಗಳೂರು ಸುರಕ್ಷಿತ ನಗರವಾಗಬೇಕಾದರೆ ಮೂಲಭೂತ ಸೌಕರ್ಯ ಅತ್ಯಗತ್ಯ. ನಾಲ್ಕು ಕ್ಷೇತ್ರಗಳಿಗೆ ಒಂದೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೂ ತೀರ್ಮಾನ ಮಾಡಲಾಗಿದೆ. ಯಾವ ಕ್ಷೇತ್ರ, ಸ್ಥಳಗಳಲ್ಲಿ ಆಸ್ಪತ್ರೆ ನಿರ್ಮಿಸಬಹುದು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ ಆಸ್ಪತ್ರೆ ಜಾಗ ಗುರುತಿಸಲಾಗುವುದು. ಪ್ರತಿದಿನ ಕನಿಷ್ಠ 75 ಸಾವಿರ ಕೊರೊನಾ ಪರೀಕ್ಷೆ ನಡೆಸಲಾಗುತ್ತದೆ ಎಂದರು.

ಮಲ್ಲೇಶ್ವರಂ ಕ್ಷೇತ್ರದ 2 ಪ್ರಮುಖ ರಸ್ತೆಗಳ ಅಗಲೀಕರಣ:

ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸ್ಯಾಂಕಿ ಕೆರೆ ರಸ್ತೆ, ಮೇಕ್ರಿ ವೃತ್ತದಿಂದ ಯಶವಂತಪುರಕ್ಕೆ ಹೋಗುವ ರಸ್ತೆ ಹಾಗೂ ಮೇಕ್ರಿ ವೃತ್ತದಿಂದ ಬಿಡಿಎವರೆಗಿನ ರಸ್ತೆಗಳನ್ನು ಅಗಲೀಕರಣ ಮಾಡುವ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದು ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಮೇಕ್ರಿ ವೃತ್ತದಿಂದ ಯಶವಂತಪುರದ ಕಡೆ ಹೋಗುವ ರಸ್ತೆ ಅಗಲೀಕರಣ ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿದೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಅಗತ್ಯ ಜಾಗ ನೀಡದ ಕಾರಣಕ್ಕೆ ಅಗಲೀಕರಣ ವಿಳಂಬವಾಗಿತ್ತು. ತ್ವರಿತವಾಗಿ ಐಐಎಸ್​ಸಿಯಿಂದ ಭೂಮಿ ಪಡೆಯಬೇಕು. ಈ ಬಗ್ಗೆ ಏನಾದರೂ ಆಡಳಿತಾತ್ಮಕ ಅಥವಾ ಕಾನೂನಾತ್ಮಕ ಸಮಸ್ಯೆಗಳಿದ್ದರೆ ತಕ್ಷಣ ಬಗೆಹರಿಸಿಕೊಳ್ಳಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಡಿಸಿಎಂ ಸೂಚಿಸಿದರು.

ಬಳ್ಳಾರಿ ರಸ್ತೆಯ ಮೇಕ್ರಿ ವೃತ್ತದಿಂದ ಬಿಡಿಎವರೆಗೂ ರಸ್ತೆ ಅಗಲೀಕರಣದ ಬಗ್ಗೆಯೂ ಚರ್ಚೆ ನಡೆಸಲಾಯಿತಲ್ಲದೆ, ಈ ಯೋಜನೆಗೆ 56 ಕೋಟಿ ರೂ. ಮೀಸಲು ಇಡಲಾಗಿದೆ. ಟೆಂಡರ್‌ ಕೂಡ ಆಗಿದೆ. ಕಾನೂನು ತೊಡಕು ಇರುವ ಕಾರಣಕ್ಕೆ ಕೈಗೆತ್ತಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಇದಕ್ಕೆ ಮೀಸಲಿಟ್ಟ ಹಣವನ್ನು ಸ್ಯಾಂಕಿ ಕೆರೆ ರಸ್ತೆ ಅಗಲ ಮಾಡಲು ಉಪಯೋಗಿಸಿ ಎನ್ನುವ ಸಲಹೆ ನೀಡಿದರು.

ಸ್ಯಾಂಕಿ ಕೆರೆ ರಸ್ತೆಯ ಅಗಲೀಕರಣದ ಬಗ್ಗೆ 10 ವರ್ಷಗಳ ಹಿಂದೆಯೇ ಹೈಕೋರ್ಟ್‌ ವಿಭಾಗೀಯ ಪೀಠದಿಂದಲೇ ಸ್ಪಷ್ಟ ಆದೇಶ ಬಂದಿತ್ತು. ಆದರೂ ಕಾಮಗಾರಿ ಶುರು ಆಗಿರಲಿಲ್ಲ. ನಿರ್ದಿಷ್ಟ ಕಾಲಾವಧಿಯೊಳಗೆ ಕಾಮಗಾರಿ ಮುಗಿಸಬೇಕು ಎಂದು ನ್ಯಾಯಾಲಯದ ಆದೇಶವಿತ್ತು. ಆದರೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದು ನ್ಯಾಯಾಂಗ ನಿಂದನೆಯಾಗುತ್ತದೆ. ಹೀಗಾಗಿ ತಕ್ಷಣ ಈ ರಸ್ತೆಯ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಬೃಹತ್‌ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಾ.ಅಶ್ವತ್ಥ ನಾರಾಯಣ್​ ತಿಳಿಸಿದರು.

ABOUT THE AUTHOR

...view details