ಬೆಂಗಳೂರು :ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆಗೂ ಮುನ್ನವೇ ಹಲವಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಬಂಡಾಯದ ಬಿಸಿ ತಟ್ಟತೊಡಗಿದೆ. ಲಕ್ಷಾಂತರ ರೂಪಾಯಿ ಶುಲ್ಕ ನೀಡಿ ಅರ್ಜಿ ಸಲ್ಲಿಸಿರುವ ಕಾರ್ಯಕರ್ತರು ತಾವು ಪ್ರಮುಖ ಟಿಕೆಟ್ ಆಕಾಂಕ್ಷಿತರೆಂದು ಚುನಾವಣೆಗೆ ಸಿದ್ಧತೆ ನಡೆಸಿರುವುದು ಕಾಂಗ್ರೆಸ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಭ್ಯರ್ಥಿಗಳ ಮೊದಲ ಕಂತಿನ ಪಟ್ಟಿ ಪ್ರಕಟಿಸಲು ಕಾಂಗ್ರೆಸ್ ಕಳೆದ ನವೆಂಬರ್ ತಿಂಗಳಲ್ಲಿ ಆಕಾಂಕ್ಷಿತರಿಂದ ಅರ್ಜಿ ಆಹ್ವಾನಿಸಿತ್ತು. ಅದೀಗ ಹಲವಾರು ವಿಧಾನಸಭೆ ಕ್ಷೇತ್ರಗಳಲ್ಲಿ ಬಂಡಾಯ ಚಟುವಟಿಕೆಗೆ ದಾರಿ ಮಾಡಿಕೊಟ್ಟಿದೆ.
ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭಾ ಕ್ಷೇತ್ರಗಳಲ್ಲಿ 1ರಿಂದ 25 ಜನರ ತನಕ ಅರ್ಜಿಗಳು ಬಂದಿದ್ದು, ಎಲ್ಲರೂ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಕ್ಷೇತ್ರದಲ್ಲಿನ ಕಾಂಗ್ರೆಸ್ ಹಿರಿಯ ನಾಯಕರು, ಹಾಲಿ ಶಾಸಕರು, ಮಾಜಿ ಸಚಿವರು ಹಾಗೂ ಪ್ರಭಾವಿ ಮುಖಂಡರನ್ನು ಮೀರಿಸುವ ಪ್ರಮಾಣದಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಲ್ಲದೇ, ಕ್ಷೇತ್ರದಲ್ಲಿ ತಾವು ಸಹ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿಕೊಂಡು ಪ್ರಚಾರ ನಡೆಸುತ್ತಿದ್ದಾರೆ.
ಅರ್ಜಿ ಸಲ್ಲಿಸಿದ ಬಳಿಕ, ತಾವು ಪ್ರಮುಖ ಆಕಾಂಕ್ಷಿಗಳಾಗಿದ್ದೇವೆ. ನಮಗೇ ಟಿಕೆಟ್ ಸಿಗಲಿದೆ ಎಂದು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ತಮಗೆ ಮತ ನೀಡುವಂತೆ ಪಕ್ಷದ ಕಾರ್ಯಕರ್ತರು ಮತ್ತು ಮತದಾರರನ್ನು ಭೇಟಿ ಮಾಡಿ ಮನವಿ ಮಾಡುತ್ತಿರುವುದು ಕೆಪಿಸಿಸಿಗೆ ಹೊಸ ಸಮಸ್ಯೆ ತಂದೊಡ್ಡಿದೆ.
ಆಕಾಂಕ್ಷಿತರಿಂದ ಪ್ರಚಾರ: ಟಿಕೆಟ್ ಅರ್ಜಿ ಹೆಸರಿನಲ್ಲಿ ಹಣ ಸಂಗ್ರಹಿಸಲು ಮಾಡಿರುವ ಪ್ಲಾನ್ ಈಗ ಕಾಂಗ್ರೆಸ್ಗೆ ತಿರುಗುಬಾಣವಾಗಿ ಪರಿಣಮಿಸಿದೆ. ಪಕ್ಷವು ಅರ್ಜಿ ಆಹ್ವಾನಿಸಿ, ಸಾಮಾನ್ಯ ವರ್ಗದವರಿಗೆ ಒಂದು ಅರ್ಜಿಗೆ 2 ಲಕ್ಷ ರೂ. ಹಾಗೂ ಎಸ್ಸಿ - ಎಸ್ಟಿ ವರ್ಗದವರಿಗೆ 1 ಲಕ್ಷ ರೂ. ಶುಲ್ಕ ನೀಡಬೇಕು ಎನ್ನುವ ನಿಯಮ ವಿಧಿಸಿತ್ತು. ಇದರಿಂದ ಪಕ್ಷಕ್ಕೆ ಸುಮಾರು 20 ಕೋಟಿ ರೂ.ಗೂ ಹೆಚ್ಚಿನ ಹಣ ಸಂಗ್ರಹವಾಗಿದೆ. ಆದರೆ, ದೊಡ್ಡ ಪ್ರಮಾಣದ ಬಂಡಾಯ ಚಟುವಟಿಕೆಗಳ ಸೃಷ್ಟಿಗೂ ಇದು ಕಾರಣವಾಗಿದೆ.
ಟಿಕೆಟ್ಗಾಗಿ ಲಕ್ಷಗಟ್ಟಲೇ ಹಣ ನೀಡಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿತರು ಪಕ್ಷದ ಅಭ್ಯರ್ಥಿಯಾಗುವುದು ಖಚಿತ. ತಮಗೆ ಟಿಕೆಟ್ ಸಿಗಲಿದೆ ಎಂದು ಕಾರ್ಯಕರ್ತರನ್ನು ನಂಬಿಸಿ, ಪ್ರಚಾರದಲ್ಲಿ ತೊಡಗಿರುವುದು ಪಕ್ಷಕ್ಕೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಪಕ್ಷವು ಒಂದು ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ನೀಡಲು ಸಾಧ್ಯವಿರುವುದರಿಂದ ಉಳಿದ ಆಕಾಂಕ್ಷಿಗಳ ಅರ್ಜಿ ಪರಿಗಣಿಸುವುದು ಕಷ್ಟವಾಗಿದೆ. ಪಕ್ಷದ ಹಾಲಿ ಶಾಸಕರಿರುವ ಕ್ಷೇತ್ರಗಳಲ್ಲಿ ಸಹ ಪಕ್ಷದ ಕಾರ್ಯಕರ್ತರು ಮತ್ತು ಇತರ ಮುಖಂಡರು ಅರ್ಜಿ ಹಾಕಿದ ಕಾರಣವನ್ನೇ ಮುಂದಿಟ್ಟುಕೊಂಡು ತಮಗೆ ಟಿಕೆಟ್ ಸಿಗುತ್ತದೆ. ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್ ಕೈತಪ್ಪಲಿದೆ ಎಂದು ಹೇಳುತ್ತಿರುವುದು ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.