ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಎಸ್ಡಿಎ ಮತ್ತು ಎಫ್ಡಿಎ ನೇಮಕಾತಿ ಪರೀಕ್ಷೆಯ ಅಕ್ರಮದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಾವು ಸಚಿವರಾಗಿದ್ದ ಅವಧಿಯಲ್ಲಿ ಪಿಎಸ್ಐ ನೇಮಕಾತಿ ಹಗರಣ ಬೆಳಕಿಗೆ ಬಂದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪ್ರಿಯಾಂಕ ಖರ್ಗೆ ಆಗ್ರಹಿಸಿದ್ದರು. ಈಗ ಅವರು ಏನು ಹೇಳುತ್ತಾರೆ. ನೈತಿಕತೆ ಇದ್ದರೆ ಕೂಡಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ನ್ಯಾಯಾಲಯದಲ್ಲಿ ಆರ್ ಡಿ ಪಾಟೀಲ್ ಜಾಮೀನು ತಿರಸ್ಕೃತವಾಗುವವರೆಗೂ ಎಲ್ಲಿದ್ದ ಎಂಬುದರ ಮಾಹಿತಿ ಇರಲಿಲ್ಲವೇ? ಆರ್.ಡಿ. ಪಾಟೀಲ್ ಅವರನ್ನು ಏಕೆ ಬಂಧಿಸಲಿಲ್ಲ ಎಂದು ಪ್ರಶ್ನಿಸಿದರು. ಪಿಎಸ್ಐ ಹಗರಣ ಪ್ರಸ್ತಾಪವಾದಾಗ ವಿಧಾನಸಭೆಯಲ್ಲಿ ಕಾಂಗ್ರೆಸ್ಗೂ ಹಾಗೂ ಆ ವ್ಯಕ್ತಿಗೂ ಸಂಬಂಧ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಈಗ ಅವರೇ ರಕ್ಷಣೆ ಕೊಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಈಗ ಏನು ಮಾಡ್ತಾರೆ ಎನ್ನುವುದನ್ನು ಹೇಳಬೇಕು. ಯಾಕೆಂದರೆ ಪ್ರಿಯಾಂಕ್ ಖರ್ಗೆ ಅವರ ಮನೆಯಲ್ಲೇ ಆರೋಪಿ ಇರುತ್ತಿದ್ದರು. ಅವರ ಆಪ್ತ ಸಖ ಎಂದು ಗಂಭೀರ ಆರೋಪ ಮಾಡಿದರು.