ಬೆಂಗಳೂರು:ನಿನ್ನೆ ಆರೋಗ್ಯ ಸಚಿವ ಸುಧಾಕರ್ 6ರಿಂದ 9ನೇ ತರಗತಿ ಮಕ್ಕಳಿಗೆ ಪರೀಕ್ಷೆ ಇಲ್ಲದೇ ತೇರ್ಗಡೆ ಮಾಡುವ ವಿಚಾರದ ಕುರಿತು ಹೇಳಿಕೆ ನೀಡಿರುವುದನ್ನು ಖಾಸಗಿ ಶಾಲೆಗಳು ಖಂಡಿಸಿವೆ.
ಆರೋಗ್ಯ ಸಚಿವರಾಗಿ ಶಿಕ್ಷಣ ಇಲಾಖೆಯ ವಿಷಯಕ್ಕೆ ಕೈ ಹಾಕಬಾರದು ಅಂತ ಮನವಿ ಮಾಡಿದ್ದಾರೆ. ಸುಧಾಕರ್ ಅವರು ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣ ಮಂತ್ರಿಗಳು ಇರುವುದನ್ನ ಮರೆತು ಪರೀಕ್ಷೆ ಇಲ್ಲದೇ ಪಾಸ್ ಮಾಡುವ ಕುರಿತು ಹೇಳುವುದು ಖಂಡನಿಯ. ಮತ್ತೆ ಮತ್ತೆ ಬೇರೆಯವರು ತಮ್ಮ ಇಲಾಖೆಗೆ ಸಂಬಂಧ ಪಡೆದವರೆಲ್ಲ ಈ ರೀತಿ ವ್ಯತಿರಿಕ್ತ ಹೇಳಿಕೆ ಕೊಟ್ಟರೆ, ಪಾಲಕ ಪೋಷಕರಲ್ಲಿ ಮಕ್ಕಳಲ್ಲಿ ಗೊಂದಲ ಸೃಷ್ಟಿಯಾಗುತ್ತೆ ಅಂತ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಶಿಕುಮಾರ್, ಕ್ಯಾಮ್ಸ್ ಕಾರ್ಯದರ್ಶಿ ಈಗಾಗಲೇ ಕೊರೊನಾದಿಂದ ಶೈಕ್ಷಣಿಕ ವರ್ಷಕ್ಕೆ ಪೆಟ್ಟು ಬಿದಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ ವರ್ಷವೇ ಪರೀಕ್ಷೆ ಇಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯುಂಟಾಗಿದೆ. ಮಕ್ಕಳಿಗೆ ಆನ್ಲೈನ್, ಆಫ್ಲೈನ್ ಮೂಲಕ ಶೈಕ್ಷಣಿಕ ವರ್ಷ ಪೂರ್ಣ ಮಾಡಿದ್ದೇವೆ, ಅವರಿಗೆ ಪರೀಕ್ಷೆ ನಡೆಸದೇ ಇದ್ದರೆ ಅನ್ಯಾಯವಾಗಲಿದೆ. ಕೊರೊನಾ ಹೆಚ್ಚಾಗುತ್ತಿದ್ದು, ಈಗಲೇ ಅವಕಾಶ ನೀಡಿದರೆ ಮಕ್ಕಳಿಗೆ ಪರೀಕ್ಷೆ ನೀಡಲಾಗುತ್ತೆ. ಬಳಿಕ ನಾವು ಶಾಲೆಗಳನ್ನ ಸಂಪೂರ್ಣ ಬಂದ್ ಮಾಡುತ್ತೇವೆ ಅಂತ ತಿಳಿಸಿದರು. ಈ ಸಂಬಂಧ ಸಿಎಂ, ಶಿಕ್ಷಣ ಮಂತ್ರಿಗಳು ಗಮನಹರಿಸಬೇಕು ಅಂತ ಮನವಿ ಮಾಡಿದರು.
ಇನ್ನು ರೂಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರತಿಕ್ರಿಯಿಸಿದ್ದು, ಮಕ್ಕಳ ಕಲಿಕೆ ತಿಳಿಯಲು ಪರೀಕ್ಷೆ ಅವಶ್ಯಕವಾಗಿದೆ. ಈ ವರ್ಷ ಪರೀಕ್ಷೆ ಇಲ್ಲದೇ ಪಾಸ್ ಎಂಬ ಕಾರಣಕ್ಕೆ ಮಕ್ಕಳು ತರಗತಿಯಲ್ಲಿ ನಿರುತ್ಸಾಹ ತೋರುತ್ತಿದ್ದಾರೆ. ಆನ್ಲೈನ್ ಅಥವಾ ಆಫ್ಲೈನ್ ತರಗತಿಗಳಿಗೆ ಹಾಜರು ಆಗುತ್ತಿಲ್ಲ. ಹೀಗಾಗಿ ಪರೀಕ್ಷೆ ಕಡ್ಡಾಯ ಮಾಡಿ, ದಿನಾಂಕವನ್ನ ನಿಗದಿ ಮಾಡುವುದರ ಮೂಲಕ ಶಿಕ್ಷಣ ಇಲಾಖೆ ಒಳ್ಳೆ ನಿರ್ಧಾರ ಕೈಗೊಳ್ಳಬೇಕು ಅಂತ ಮನವಿ ಮಾಡಿದರು.