ಬೆಂಗಳೂರು:ಕೊರೊನಾ ಸೋಂಕಿತ ರೋಗಿಗಳಿಗೆ ಶೇ. 50ರಷ್ಟು ಬೆಡ್ಗಳನ್ನು ಒದಗಿಸಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ ಎಂದು, ಕಂದಾಯ ಸಚಿವ ಹಾಗೂ ಬೆಂಗಳೂರು ಕೋವಿಡ್ ಉಸ್ತುವಾರಿ ಹೊತ್ತಿರುವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಭೆ ನಡೆದಿದೆ. ಸಭೆ ಫಲಪ್ರದವಾಗಿದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಆಕ್ಸಿಜನ್ ಇರುವ ಬೆಡ್ಗಳನ್ನು ಕೊಡುವಂತೆ ಕೇಳಿದ್ದೇವೆ. ಅವರು ಅದಕ್ಕೆ ಒಪ್ಪಿಗೆ ನೀಡಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು ಹತ್ತು ಸಾವಿರ ಬೆಡ್ಗಳಿವೆ. ಅದರಲ್ಲಿ 5 ಸಾವಿರ ಬೆಡ್ಗಳು ನಮಗೆ ಸಿಗುವ ಸಾಧ್ಯತೆ ಇದೆ ಎಂದು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್ ಸಮಿತಿ ರಚನೆ :
ಸರ್ಕಾರದ ಬೆಂಬಲಕ್ಕೆ ಖಾಸಗಿ ಆಸ್ಪತ್ರೆಗಳು ಸದಾ ಇರಲಿ ಎಂದ ಅವರು, ಖಾಸಗಿ ಆಸ್ಪತ್ರೆಯ ಬೆಡ್ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಒಂದು ಸಮಿತಿಯನ್ನು ರಚಿಸಲಾಗಿದೆ. ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ನೇತೃತ್ವದಲ್ಲಿ ಐದು ಜನರ ಸಮಿತಿ ರಚಿಸಲಾಗಿದ್ದು, ಈ ಸಮಿತಿಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಹಾಗೂ ಆಸ್ಪತ್ರೆಯಿಂದ ಡಾ. ರವೀಂದ್ರ ಮತ್ತು ನಾಗೇಂದ್ರ ಸ್ವಾಮಿಯವರು ಸಮಿತಿಯಲ್ಲಿ ಇರುತ್ತಾರೆ. ಕಾಲ ಕಾಲಕ್ಕೆ ಸಭೆಗಳನ್ನು ನಡೆಸಿ ಅಗತ್ಯ ಕ್ರಮ ವಹಿಸುವ ಬಗ್ಗೆ ಸಮಿತಿ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ಕಷ್ಟದ ಸಂದರ್ಭದಲ್ಲಿ ಸರ್ಕಾರ ದೊಡ್ಡ ಹೋರಾಟ ಪ್ರಾರಂಭ ಮಾಡಿದೆ. ಬೇರೆ ರಾಜ್ಯಗಳ ಸರ್ಕಾರಗಳು ಕೈ ಚೆಲ್ಲಿ ಕುಳಿತಿವೆ. ಆದರೆ, ನಮ್ಮ ಸರ್ಕಾರ ನಿಯಂತ್ರಣ ಮಾಡಲು ಪ್ರಯತ್ನ ನಡೆಸುತ್ತಿದೆ ಎಂದರು.
ಬೆಂಗಳೂರಿನಲ್ಲಿ ಕೊರೊನಾ ತಡೆಗೆ ಎಲ್ಲಾ ರೀತಿಯ ಕ್ರಮಗಳನ್ನು ಮಾಡಲಾಗುತ್ತಿದೆ. ಇನ್ನು ಮುಂದೆ ಯಾವುದೇ ಕೊರೊನಾ ರೋಗಿ ಪರದಾಡಬಾರದು. ಪಾಸಿಟಿವ್ ಬಂದವರು 8 ಗಂಟೆಯೊಳಗೆ ಕೋವಿಡ್ ಕೇರ್ ಸೆಂಟರ್ಗೆ ದಾಖಲು ಮಾಡಬೇಕು. ಈಗ ಸದ್ಯಕ್ಕೆ ರಿಜಿಸ್ಟ್ರೇಷನ್ ಆಗಿರುವ ಆಸ್ಪತ್ರೆಗಳಲ್ಲಿ ಬೆಡ್ ಕೊಡಲು ತೀರ್ಮಾನ ಮಾಡಿದ್ದಾರೆ. ಉಳಿದ ಆಸ್ಪತ್ರೆಗಳನ್ನು ಸಂಪರ್ಕಿಸಲಾಗುತ್ತದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವೈದ್ಯರು ಅಥವಾ ನರ್ಸ್ಗಳು ಮೃತಪಟ್ಟರೆ 50 ಲಕ್ಷ ರೂ. ವಿಮೆ ಸೌಲಭ್ಯ ಕೊಡಲು ಸರ್ಕಾರ ಒಪ್ಪಿಗೆ ನೀಡಿದೆ. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳಿಗೆ ಭದ್ರತೆ ಕೇಳಿದ್ದಾರೆ. ಅದಕ್ಕೂ ಸಮ್ಮತಿಸಿದೆ ಎಂದು ಅಶೋಕ್ ತಿಳಿಸಿದರು.