ಬೆಂಗಳೂರು: ಹಿಂದೂ ಪದದ ಬಗ್ಗೆ ವಿವಾದಿತ ಹೇಳಿಕೆ ನೀಡಿರುವ ಆರೋಪದಲ್ಲಿ ಮಾಜಿ ಸಚಿವ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ ವಿರುದ್ಧ ವಕೀಲ ಕೆ. ದಿಲೀಪ್ ಕುಮಾರ್ ಎಂಬುವರು ನಗರದ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದಾರೆ.
ನಗರದ ವಕೀಲ ಕೆ. ದಿಲೀಪ್ ಕುಮಾರ್ ಅವರು ಬುಧವಾರ ನಗರದ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದು, ಗಲಭೆ ಮತ್ತು ಮಾನಹಾನಿ ಪ್ರಕರಣ ಸಂಬಂಧ ಸತೀಶ್ ಜಾರಕಿಹೊಳಿ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ನ್ಯಾಯಾಲಯವು ದೂರಿನ ವಿಚಾರಣೆಯನ್ನು ನ. 18ಕ್ಕೆ ಮುಂದೂಡಿದೆ.
ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಮಾತನಾಡಿ, ಹಿಂದೂ ನಮ್ಮ ಪದವೇ ಅಲ್ಲ. ಹಿಂದೂ ಪದ ಪರ್ಷಿಯನ್‌ನಿಂದ ಬಂದಿರುವ ಪದ. ಹಿಂದೂ ಪದದ ಅರ್ಥ ಅಶ್ಲೀಲವಾಗಿದೆ. ಆ ಪದದ ಅರ್ಥ ತಿಳಿದರೆ ನಾಚಿಕೆಯಾಗುತ್ತದೆ. ಪರ್ಷಿಯನ್ ಪದವಾದ ಹಿಂದೂ ನಮ್ಮ ಪದ ಹೇಗಾಯಿತು. ಈ ವಿಷಯದಲ್ಲಿ ಚರ್ಚೆಯಾಗಬೇಕು. ಎಲ್ಲಿಂದಲೋ ತಂದ ಪದವನ್ನು ನಮ್ಮ ಮೇಲೆ ಹೇರಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು ಅಂತಾ ದೂರಿನಲ್ಲಿ ತಿಳಿಸಲಾಗಿದೆ.
ಹಾಗಾದರೆ, ಆ ಪದದ ಅರ್ಥವೇನು? ಎಂದು ಅಲ್ಲಿದ್ದವರು ಪ್ರಶ್ನಿಸಿದಾಗ, ವಾಟ್ಸ್ಆ್ಯಪ್, ವಿಕಿಪೀಡಿಯಾ ನೋಡಿದರೆ ನಿಮಗೆ ತಿಳಿಯುತ್ತದೆ ಎಂದು ಶಾಸಕರು ತಿಳಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಈ ಹೇಳಿಕೆಯ ವಿಡಿಯೋ ಸೋಮವಾರ ವೈರಲ್ ಆಗಿದೆ. ಅಲ್ಲದೇ, ತಮ್ಮ ಹೇಳಿಕೆ ವೈಯಕ್ತಿಕವಾದುದಲ್ಲ. ವಿಕಿಪೀಡಿಯಾ ಮತ್ತು ಹಲವು ಲೇಖಕರು ಬರೆದಿರುವ ಲೇಖನಗಳನ್ನು ಆಧರಿಸಿ ನಾನು ಹೇಳಿಕೆ ನೀಡಿದ್ದೇನೆ ಎಂದು ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದರು. ಈ ಕುರಿತ ಹೇಳಿಕೆ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ ಎಂದು ದೂರಿನಲ್ಲಿ ದೂರುದಾರರು ತಿಳಿಸಿದ್ದಾರೆ.
ನಿರ್ಲಕ್ಷದ ನೋಟದಲ್ಲಿ ನಗು ಬೀದಿದ್ದಾರೆ: ಅಲ್ಲದೇ, ಈ ಸುದ್ದಿಯನ್ನು ಓದಿದ ನನಗೆ ಅವಮಾನವಾಗಿದೆ. ಇದರಿಂದ ನಾನು ಮಾನಸಿಕವಾಗಿ ಬಹಳ ಖಿನ್ನತೆಗೆ ಒಳಗಾಗಿದ್ದೇನೆ. ನನಗೆ ಇತರ ಧರ್ಮದ ಸಾಕಷ್ಟು ಕಕ್ಷಿದಾರರು ಹಾಗೂ ಸ್ನೇಹಿತರಿದ್ದಾರೆ. ಅವರು ನನ್ನತ್ತ ಅವಮಾನ ಮತ್ತು ನಿರ್ಲಕ್ಷ್ಯದ ನೋಟದಲ್ಲಿ ನಗು ಬೀರಿದ್ದಾರೆ. ಹಿಂದೂ ಧರ್ಮದ ಕೆಲ ಸ್ನೇಹಿತರು ಸಹ ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ಅವಮಾನ ಮತ್ತು ಮಾನಹಾನಿಗೆ ಗುರಿಯಾಗಿದ್ದಾರೆ. ನನ್ನ ಹಾಗೂ ಹಿಂದೂ ಧರ್ಮದ ಅಪಾರ ಜನರ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ದೂರುದಾರರು ಕೋರಿದ್ದಾರೆ.
ನ್ಯಾಯಾಲಯದಲ್ಲಿ ಕಾಗ್ನಿಜೆನ್ಸ್ ತೆಗೆದುಕೊಳ್ಳಬೇಕು: ಆದ್ದರಿಂದ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಐಪಿಸಿ 500 (ಮಾನಹಾನಿ) ಮತ್ತು 153 (ಗಲಭೆ ಉಂಟು ಮಾಡಲು ಪ್ರಜೋಧನೆ)ರ ಅಡಿ ಶಿಕ್ಷಾರ್ಹ ಅಪರಾಧವಾಗಿದೆ. ಆರೋಪಿಯ ವಿರುದ್ದ ಸಮನ್ಸ್ ಜಾರಿ ಮಾಡಿ ನ್ಯಾಯಾಲಯದಲ್ಲಿ ಕಾಗ್ನಿಜೆನ್ಸ್ ತೆಗೆದುಕೊಳ್ಳಬೇಕು. ಪ್ರಕರಣದ ವಿಚಾರಣೆ ನಡೆಸಿ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ತನ್ನ ದೂರಿನಲ್ಲಿ ಮನವಿ ಮಾಡಿದ್ದಾರೆ.
ಓದಿ:ನನ್ನ ಹೇಳಿಕೆ ಹಿಂಪಡೆಯುತ್ತಿದ್ದೇನೆ.. ಸಿಎಂಗೆ ಪತ್ರ ಬರೆದ ಸತೀಶ್ ಜಾರಕಿಹೊಳಿ