ಬೆಂಗಳೂರು:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 72 ವಸಂತಗಳನ್ನು ಪೂರೈಸಿ ಇಂದು 73ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಮೋದಿ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ನಿರ್ಧರಿಸಿರುವ ಬಿಜೆಪಿ, ಇಂದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ದಿನವನ್ನು ಜನಸ್ನೇಹಿ ಕಾರ್ಯಕ್ರಮವನ್ನಾಗಿ ದೇಶದೆಲ್ಲೆಡೆ ಆಚರಿಸಲಾಗುವುದು ಎಂದು ಬಿಜೆಪಿ ಹೇಳಿದೆ.
ಹಲವು ಕಡೆಗಳಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಾಡು ಮಾಡಲಾಗುತ್ತಿದೆ. ನಮೀಬಿಯಾದಿಂದ ತರಲಾಗುತ್ತಿರುವ ಎಂಟು ಚಿರತೆಗಳನ್ನು ಮೋದಿ ಅವರು ಇಂದು ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಹಸ್ತಾಂತರಿಸಲಿದ್ದಾರೆ. ಈ ಮಧ್ಯೆ ಹಲವು ನಾಯಕರು, ರಾಜ್ಯದ ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.
"ಧೀಮಂತ ನಾಯಕ, ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಡಿನ ಜನತೆಯ ಪರವಾಗಿ ಜನ್ಮದಿನದ ಶುಭಾಶಯಗಳು. ಆಯುಷ್ಯ, ಆರೋಗ್ಯ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ.
"ನಮ್ಮ ಪ್ರೀತಿಯ ನಾಯಕ ಮತ್ತು ಪ್ರಧಾನಮಂತ್ರಿ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ನಾಯಕತ್ವ, ಬದ್ಧತೆ ಮತ್ತು ದೂರದೃಷ್ಟಿ ರಾಷ್ಟ್ರಕ್ಕೆ ಸ್ಫೂರ್ತಿ. ನಿಮ್ಮ ಉತ್ತಮ ಆರೋಗ್ಯ ಮತ್ತು ರಾಷ್ಟ್ರವನ್ನು ಮುನ್ನಡೆಸುವಲ್ಲಿ ದೀರ್ಘಾಯುಷ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ" ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
"12 ವರ್ಷ ಮುಖ್ಯಮಂತ್ರಿಯಾಗಿ, 8 ವರ್ಷ ಪ್ರಧಾನಿಯಾಗಿ ದಣಿವರಿಯದೇ ದೇಶವನ್ನು ಮುನ್ನಡೆಸುತ್ತಿರುವ ನೆಚ್ಚಿನ ಪ್ರಧಾನಿ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು" ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.
ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಕೂಡ ಶುಭಾಶಯ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ನಮ್ಮ ಶ್ರೇಷ್ಠ ಮತ್ತು ವೈವಿಧ್ಯಮಯ ರಾಷ್ಟ್ರದ ಸೇವೆಯಲ್ಲಿ ಇನ್ನೂ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಲು ದೇವರು ಅವರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ಹುಟ್ಟುಹಬ್ಬ: ಇಂದು ಹುಟ್ಟುವ ಮಕ್ಕಳಿಗೆ ಚಿನ್ನದ ಉಂಗುರ ನೀಡಲಿರುವ ಬಿಜೆಪಿ