ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಸಂಬಂಧ ತನಿಖೆಗೆ ಇಳಿದಿರುವ ಬೆಂಗಳೂರು ಪೊಲೀಸರಿಗೆ ಪ್ರತಿಷ್ಠಿತ ರಾಜಕಾರಣಿಗಳು, ಹೆಸರುವಾಸಿ ಕ್ರಿಕೆಟಿಗರು, ಉದ್ಯಮಿಗಳು ಕರೆ ಮಾಡಿ ಕೆ.ಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಭಾಗಿಯಾಗಿರುವ ಕೆಲ ಪ್ರತಿಷ್ಠಿತ ಆಟಗಾರರನ್ನ ಬಂಧಿಸಬೇಡಿ ಈ ಪ್ರಕರಣದಿಂದ ಮುಕ್ತಿ ನೀಡಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಮೇಲೆ ಒತ್ತಡ ತಂದಿರುವ ವಿಚಾರವನ್ನ ಸ್ವತಃ ಭಾಸ್ಕರ್ ರಾವ್ ಅವರು ಮಾಧ್ಯಮಗಳ ಮುಂದೆ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಪ್ರತಿಷ್ಠಿತ ಆಟಗಾರರನ್ನ ಬಂಧಿಸದಂತೆ ಒತ್ತಡ ಬರ್ತಿದೆ: ಭಾಸ್ಕರ್ ರಾವ್ ಸ್ಫೋಟಕ ಮಾಹಿತಿ - ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿಕೆ
ಪ್ರತಿಷ್ಠಿತ ಆಟಗಾರರನ್ನ ಬಂಧಿಸಬೇಡಿ, ಭವಿಷ್ಯ ಹಾಳಾಗುತ್ತೆ ಅವರನ್ನು ಬಿಟ್ಟು ಬಿಡಿ ಎಂದು ಪೊಲೀಸರ ಮೇಲೆ ಒತ್ತಡ ಹೆರಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಹಗರಣ ಸಂಬಂಧ ಈಗಾಗಲೇ ಬೆಳಗಾವಿ ಫ್ಯಾಂಥರ್ಸ್ ಮಾಲೀಕ ಅಸ್ಪಕ್ ಅಲಿಯನ್ನ ಬಂಧಿಸಿದ ಸಿಸಿಬಿ ನಂತರ ಆತನ ವಿಚಾರಣೆಯಿಂದ ಪ್ರತಿಷ್ಠಿತ ಬೌಲರ್ ಗಳು, ಬ್ಯಾಟ್ಸ್ಮನ್ಗಳು ಭಾಗಿಯಾಗಿರುವ ವಿಚಾರವನ್ನ ಬಾಯಿಬಿಟ್ಟಿದ್ದಾರೆ. ಸಂದೀಪ್ ಪಾಟೀಲ್ ನೇತೃತ್ವದ ಸಿಸಿಬಿ ಪ್ರಸಿದ್ಧ ಆಟಗಾರರಾದ ಸಿಎಂ ಗೌತಮ್ ರಣಜಿ, ಅಬ್ರಾರ್ ಖಜಿಯನ್ನ ಬಂಧಿಸಿದ್ದಾರೆ. ಆದ್ರೆ ಕೆಪಿಎಲ್ ಹಗರಣವನ್ನ ಕೈಗೆತ್ತಿಕೊಂಡ ಮೇಲೆ ಪೊಲೀಸರ ಮೇಲೆ ಸಾಕಷ್ಟು ಒತ್ತಡ ಬರುತ್ತಿರುವ ವಿಚಾರ ಇದೀಗ ಬಯಲಾಗಿದೆ.
ಈ ಸಂಬಂಧ ಮಾತನಾಡಿರುವ ನಗರ ಆಯುಕ್ತ ಭಾಸ್ಕರ್ ರಾವ್, ನಾಲ್ಕನೇ ಪ್ರಕರಣವನ್ನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದೇವೆ. ಇವೆಲ್ಲ ಪೂರ್ವ ನಿಯೋಜಿತವಾಗಿ ಮ್ಯಾಚ್ ಫಿಕ್ಸ್ ಆಗಿವೆ. ತನಿಖೆಯಲ್ಲಿ ಟೀಂ ಓನರ್ಸ್ ಬ್ರೋಕರ್ಗಳು, ಅಧಿಕಾರಿಗಳ ಪಾತ್ರ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಾಗೆಯೇ ನನ್ನ ಮೇಲೆಯೂ ಕ್ರಮ ಕೈಗೊಳ್ಳದಂತೆ ಒತ್ತಡ ಬರ್ತಿದೆ. ಪೊಲೀಸರು ಆಟಗರಾರರನ್ನು ಬಂಧಿಸಿದರೆ ಪ್ರತಿಷ್ಠಿತ ಕ್ರಿಕೆಟಿಗರ ಲೈಫೇ ಹಾಳಾಗುತ್ತೆ ಹೀಗಾಗಿ ಬಿಟ್ಬಿಡಿ ಎನ್ನುತ್ತಿದ್ದಾರೆ. .ಆದ್ರೆ ನಾವು ಹಾಗೆಲ್ಲ ಬಿಡೋಕ್ಕೆ ಆಗಲ್ಲ. ಪೊಲೀಸರು ಯಾವ ಒತ್ತಡಕ್ಕೂ ಮಣಿಯದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆಟಗಾರರು, ಬುಕ್ಕಿಗಳು ಸಿಕ್ಕಿ ಬೀಳುವ ಸಾಧ್ಯತೆ ಇದೆ. ಈ ಸಂಬಂಧ ಸುದೀರ್ಘ ತನಿಖೆ ಮುಂದುವರೆಯಲಿದೆ ಎಂದು ಬಾಸ್ಕರ್ ರಾವ್ ಹೇಳಿದರು.