ಬೆಂಗಳೂರು: ನಗರದ ವಸಂತಪುರದ ವೈಕುಂಠ ಬೆಟ್ಟದಲ್ಲಿ ನಿರ್ಮಿಸಲಾಗಿರುವ ರಾಜಾಧಿರಾಜ ಗೋವಿಂದ ದೇವಸ್ಥಾನದವು ಆಧುನಿಕ ಯಾತ್ರಾ ಸ್ಥಳವಾಗಿ ಹೊರಹೊಮ್ಮುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.
ಇಸ್ಕಾನ್ ನಿರ್ಮಿಸಿರುವ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನದ ಲೋಕಾರ್ಪಣೆ ಕಾರ್ಯ ನೆರವೇರಿಸಿ ಮಾತನಾಡಿದ ಅವರು, ದೇವಾಲಯಗಳು ಹಿಂದೂ ಧರ್ಮದ ಪ್ರಮುಖ ಸಂಕೇತಗಳಾಗಿವೆ. ಪವಿತ್ರ ಸ್ಥಳಗಳಾಗಿವೆ. ದೇವರ ಆರಾಧಕರು ದೈವಿಕ ಉಪಸ್ಥಿತಿ ಅನುಭವಿಸುತ್ತಾರೆ. ಇನ್ನೊಂದು ಹಂತದಲ್ಲಿ ದೇವಾಲಯಗಳು ಸ್ಥಳಗಳಿಗಿಂತ ಹೆಚ್ಚಾಗಿ ಪೂಜೆ, ಕಲೆ, ವಾಸ್ತುಶಿಲ್ಪ, ಭಾಷೆ ಮತ್ತು ಜ್ಞಾನ ಸಂಪ್ರದಾಯಗಳ ಸಂಗಮ ಸ್ಥಳವಾಗಿದೆ ಎಂದರು.
ನಮ್ಮ ಮಹಾನ್ ಆಧ್ಯಾತ್ಮಿಕ ನಾಯಕರಾದ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ ಮತ್ತು ಚೈತನ್ಯ ಮಹಾಪ್ರಭುಗಳು ನಮಗೆ ವಿವಿಧ ಮಾರ್ಗಗಳನ್ನು ತೋರಿಸಿದರು. ನಂತರದ ದಿನಗಳಲ್ಲಿ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರು ಸೇರಿದಂತೆ ಅನೇಕರು ಅದೇ ಧೋರಣೆಯನ್ನು ಪುನರುಚ್ಚರಿಸಿದ್ದಾರೆ. ಭಗವದ್ಗೀತೆ ಎಲ್ಲ ಹಿಂದೂಗಳ ಅತ್ಯಂತ ಪ್ರಮುಖವಾದ ಗ್ರಂಥವಾಗಿದೆ ಎಂದು ಹೇಳಿದರು.
ಇಸ್ಕಾನ್ ಬೆಳವಣಿಗೆಗೆ ಶ್ಲಾಘನೆ:ಇಸ್ಕಾನ್ ಸ್ಥಾಪಕರಾದ ಶ್ರೀಲ ಪ್ರಭುಪಾದರು ಭಾರತದ ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಪಾಶ್ಚಿಮಾತ್ಯಕ್ಕೆ ಕೊಂಡೊಯ್ಯಲು ಪ್ರಯಾಣ ಬೆಳೆಸಿದರು ಎಂದು ತಿಳಿದು ನನಗೆ ಆಶ್ಚರ್ಯವಾಯಿತು. ಸಂಕಟದ ಸಮಯದಲ್ಲಿ ಆಧ್ಯಾತ್ಮಿಕ ಸಹಾಯವನ್ನು ಬಯಸುವವರಿಗೆ ಅವರ ಮಾತುಗಳು ಬಾಯಾರಿದವರಿಗೆ ಮಳೆಯ ಮೊದಲ ಹನಿಗಳಂತೆ ಅನಿಸಿರಬೇಕು. ಕೇವಲ 12 ವರ್ಷಗಳಲ್ಲಿ ಅವರು ನೂರಕ್ಕೂ ಹೆಚ್ಚು ಕೃಷ್ಣ ದೇವಾಲಯಗಳು, ಪ್ರಕಾಶನ ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಮತ್ತು ಕೃಷಿ ಸಮುದಾಯಗಳ ಅಂತಾರಾಷ್ಟ್ರೀಯ ಒಕ್ಕೂಟವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು ಎಂದು ಇಸ್ಕಾನ್ ಬೆಳವಣಿಗೆಗೆ ಶ್ಲಾಘನೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ಇಸ್ಕಾನ್ ಮಾನವೀಯ ಕೆಲಸಗಳಿಗೆ ಸರ್ಕಾರದ ಸಹಕಾರ: ಸಿಎಂ ಬೊಮ್ಮಾಯಿ