ಕರ್ನಾಟಕ

karnataka

ETV Bharat / state

ಸೋಲದೇವನಹಳ್ಳಿ ತೋಟದಲ್ಲಿ ಸರ್ಕಾರಿ ಗೌರವಗಳೊಂದಿಗೆ ಮೇರು ನಟಿ ಅಂತ್ಯಕ್ರಿಯೆಗೆ ಸಿದ್ಧತೆ - ಈಟಿವಿ ಭಾರತ ಕನ್ನಡ

ಸೋಲದೇವನಹಳ್ಳಿಯ ಅವರ ತೋಟದಲ್ಲಿ ನಟಿ ಲೀಲಾವತಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರ ಗೌರವಗಳೊಂದಿಗೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೇರು ನಟಿ ಲೀಲಾವತಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ
ಮೇರು ನಟಿ ಲೀಲಾವತಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

By ETV Bharat Karnataka Team

Published : Dec 9, 2023, 1:51 PM IST

Updated : Dec 9, 2023, 2:39 PM IST

ಮೇರು ನಟಿ ಅಂತ್ಯಕ್ರಿಯೆಗೆ ಸಿದ್ಧತೆ

ಬೆಂಗಳೂರು: ಹಿರಿಯ ನಟಿ ಲೀಲಾವತಿ ಅವರ ಅಂತ್ಯಕ್ರಿಯೆಗೆ ಸೋಲದೇವನಹಳ್ಳಿಯಲ್ಲಿರುವ ಅವರ ತೋಟದಲ್ಲಿನ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಸಮಾಧಿ ಕೊರೆಯಲಾಗಿದ್ದು, ಸಂಜೆ ಎಲ್ಲಾ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ- ಸಿಎಂ: ’’ಲೀಲಾವತಿ ಅವರ ಫಾರಮ್​ ಹೌಸ್​ಗೆ ಹೋಗಿ ಅವರನ್ನು ಭೇಟಿ ಮಾಡಿದ್ದೆ. ವಿನೋದ್ ರಾಜ್​ಗೆ ತಾಯಿ ಮೇಲೆ ಅತಿಯಾದ ಪ್ರೀತಿ ಇದೆ. ಚೆನ್ನಾಗಿ ನೋಡ್ಕೋ ಅಂತಾ ವಿನೋದ್ ರಾಜ್​ಗೆ ಹೇಳಿದ್ದೆ. ಸಹಾಯ ಬೇಕಾದರೆ ಕೇಳು ಅಂತ ಸಹ ಸೂಚಿಸಿದ್ದೆ. ಆದರೆ, ಅವರು ಸಹಾಯ ಕೇಳಿಲ್ಲ. ಸರ್ಕಾರದ ವತಿಯಿಂದ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲು ಸರ್ಕಾರಕ್ಕೆ ಆದೇಶ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಡಿಸಿಎಂ ಏನು ಹೇಳಿದರು?:40 ವರ್ಷಗಳಿಂದ ನಾನು ಲೀಲಾವತಿ ಅವರ ಸಿನಿಮಾ ನೋಡ್ತಾ ಬಂದಿದ್ದೇನೆ. ಕೆಲ ದಿನಗಳ ಹಿಂದೆ ಅವರು ನಮ್ಮ ಮನೆಗೆ ಬಂದಿದ್ದರು. ಪಶುವೈದ್ಯ ಶಾಲೆಯನ್ನು ಕಟ್ಟಿದ್ದೇವೆ. ಉದ್ಘಾಟನೆಗೆ ಬರುವಂತೆ ಆಹ್ವಾನಿಸಿದ್ದರು. ಇಡೀ ಜೀವನ ತನ್ನ ತಾಯಿಯ ಸೇವೆಗೆ ವಿನೋದ್ ರಾಜ್ ಮುಡುಪಿಟ್ಟಿದ್ದಾರೆ. ನಟಿ ಲೀಲಾವತಿ ಅವರ ಹೆಸರು ಉಳಿಯೋಕೆ ಏನೆಲ್ಲ ಮಾಡಬೇಕೋ ಅದನ್ನು ನಮ್ಮ ಸರ್ಕಾರ ಮಾಡುತ್ತೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಓದಿ:ನೆರೆಗೆ ಸಿಕ್ಕ ಜಾನುವಾರುಗಳಿಗಾಗಿ ಮೇವು ಕಳುಹಿಸಿಕೊಟ್ಟ ನಟಿ ಲೀಲಾವತಿ

ಹಳ್ಳಿಯಲ್ಲಿ ಹುಟ್ಟಿ ಮೇರು ಸಾಧನೆ ಎಂದ ಬಿಎಸ್​ವೈ: ಮೇರು ನಟಿ ಲೀಲಾವತಿ ಸುಮಾರು 600ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ. ಬೆಳ್ತಂಗಡಿಯ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಅವರ ಕೊಡುಗೆ ಅಪಾರ. ಅವರನ್ನು ಕಳೆದುಕೊಂಡು ಕನ್ನಡ ನಾಡು ಬಡವಾಗಿದೆ. ಅವರ ಸಾವಿನ ನೋವು ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದು ಯಡಿಯೂರಪ್ಪ ಹೇಳಿದರು.

ಸಚಿವ ತಂಗಡಗಿ ಪ್ರತಿಕ್ರಿಯೆ:ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು ಲೀಲಾವತಿಯವರು. ಅವರಿಗೆ ಕೃಷಿಯ ಬಗ್ಗೆ ಅಪಾರ ಆಸಕ್ತಿ ಇತ್ತು‌. ಅವರಿಗೆ ಇಳಕಲ್ ಸೀರೆಯೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದೆ. ಅದೇ ಸೀರೆ ಇವತ್ತು ಉಡಿಸಿದ್ದಾರೆ ಎಂದು ಶಿವರಾಜ್ ತಂಗಡಗಿ ಹೇಳಿದರು.

ಸಚಿವ ಹೆಚ್​ಸಿ ಮಹದೇವಪ್ಪ ಮಾತನಾಡಿ, ಲೀಲಾವತಿ ಚಲನಚಿತ್ರರಂಗಲ್ಲಿ ಮರೆಯಲಾಗದ ವ್ಯಕ್ತಿತ್ವ ಹೊಂದಿದವರು. ಲೋಕೋಪಯೋಗಿ ಸಚಿವನಾಗಿದ್ದಾಗ ನಮ್ಮ ಮನೆಗೆ ಬರ್ತಿದ್ರು. ಅಲ್ಲಿನ ಅರಣ್ಯ ಸಮಸ್ಯೆ ಬಗ್ಗೆ ಹೇಳ್ತಿದ್ರು, ಸದಾ ಜನರ ಹಿತಕ್ಕಾಗಿ ದುಡಿಯುತ್ತಿದ್ರು. ನಾವು ಸಮಾಜಸೇವಕಿ ಮಾನವತಾವಾದಿಯನ್ನು ಕಳೆದುಕೊಂಡಿದ್ದೇವೆ ಎಂದರು.

ಸದ್ಯ ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಿಎಂ ಸಿದ್ದರಾಮಯ್ಯ , ಹಿರಿಯ ನಟರಾದ ದ್ವಾರಕೀಶ್, ಶ್ರೀನಾಥ್, ನಿರ್ದೇಶಕ ನಾಗಣ್ಣ, ಹಿರಿಯ ನಟ ಶ್ರೀನಿವಾಸ್ ಮೂರ್ತಿ ಹಾಗೂ ಉಮಾಶ್ರೀ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು, ಕಲಾವಿದರು ಅಂತಿಮ ದರ್ಶನ ಪಡೆದರು.

ಇದನ್ನೂ ಓದಿ:ರವೀಂದ್ರ ಕಲಾಕ್ಷೇತ್ರದಲ್ಲಿ ಲೀಲಾವತಿ ಪಾರ್ಥಿವ ಶರೀರ: ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

Last Updated : Dec 9, 2023, 2:39 PM IST

ABOUT THE AUTHOR

...view details