ಬೆಂಗಳೂರು: ಪ್ರಜಾಧ್ವನಿ ಹೆಸರಿನಲ್ಲಿ ಜ.11(ನಾಳೆಯಿಂದ) ಬಸ್ ಯಾತ್ರೆ ಆರಂಭಿಸುತ್ತಿದ್ದು, ಧನಾತ್ಮಕ ಚಿಂತನೆಯಡಿ ಮುಂದಡಿ ಇಡುತ್ತಿದ್ದೇವೆ. ಇಲ್ಲಿ ನಕಾರಾತ್ಮಕ ವಿಚಾರವನ್ನು ಗಮನ ಸೆಳೆಯುವ ಕಾರ್ಯ ಮಾಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಜಾಧ್ವನಿ ಲೋಗೊ ಅನಾವರಣಗೊಳಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜನರಿಗೋಸ್ಕರ ಬಸ್ ಯಾತ್ರೆ ಹಮ್ಮಿಕೊಂಡಿದ್ದೇವೆ. ಜನರ ಭಾವನೆಯನ್ನು ತಿಳಿಸುವ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಕಳೆದ ಮೂರು ವರ್ಷ ಬಿಜೆಪಿ ಸರ್ಕಾರದಲ್ಲಿ ಆಗಿರುವ ಅಭಿವೃದ್ಧಿ ಕೊರತೆ ನಿವಾರಿಸಿ, ನಾವು ಅಧಿಕಾರಕ್ಕೆ ಬಂದ ನಂತರ ಯಾವ ಅಭಿವೃದ್ಧಿ ಕಾರ್ಯ ಮಾಡುತ್ತೇವೆ ಎನ್ನುವುದನ್ನು ತಿಳಿಸುತ್ತೇವೆ. ಮಹಾತ್ಮ ಗಾಂಧಿ ಅವರು ಅಧಿಕಾರ ವಹಿಸಿಕೊಂಡ ಗಾಂಧಿಬಾವಿ ಸ್ಥಳದಿಂದ ನಮ್ಮ ಬಸ್ ಯಾತ್ರೆ ಆರಂಭವಾಗುತ್ತಿದೆ. ಮಹಾತ್ಮ ಗಾಂಧಿಯವರಿಗೆ ಗೌರವ ಸಲ್ಲಿಸಿ ಆರಂಭಿಸುತ್ತೇವೆ. ಬ್ರಿಟೀಷರನ್ನು ಓಡಿಸಿ, ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಅಧಿಕಾರ ವಹಿಸಿಕೊಂಡ ಪುಣ್ಯಭೂಮಿಯಿಂದ ಯಾತ್ರೆ ಆರಂಭಿಸಲಿದ್ದು, ಭ್ರಷ್ಟ ಬಿಜೆಪಿ ಸರ್ಕಾರವನ್ನು ತೊಲಗಿಸುವ ಸಂಕಲ್ಪ ತೊಡುತ್ತಿದ್ದೇವೆ. ರಾಜ್ಯದಲ್ಲಿ ಬದಲಾವಣೆಯ ಮುನ್ನುಡಿ ಬಡೆಯಲು ಬಯಸುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ:ಕರ್ನಾಟಕ ಒಂದು ಅಭಿವೃದ್ಧಿಶೀಲ ರಾಜ್ಯ. ಇಲ್ಲಿನ ಆಡಳಿತವನ್ನು ಜನ ಗೌರವದಿಂದ ಕಾಣುತ್ತಿದ್ದರು. ಇಡೀ ವಿಶ್ವವೇ ಇಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಿತ್ತು. ಜನ ಉದ್ಯೋಗ ಇಲ್ಲಿ ಮಾಡಲು ಬಯಸುತ್ತಿದ್ದರು. ಭಾರತವನ್ನು ಕರ್ನಾಟಕದ ಮೂಲಕ ಇಡೀ ವಿಶ್ವ ನೋಡುತ್ತಿದ್ದ ದಿನ ಗಮನಿಸಿದ್ದೇವೆ. ಇಂದು ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ಭರವಸೆ ಈಡೇರಿಲ್ಲ. ರೈತರ ಬದುಕು ಹಸನಾಗಿಲ್ಲ. ಯುವಕರಿಗೆ ಉದ್ಯೋಗ ಸಿಕ್ಕಿಲ್ಲ. ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ಹೆಚ್ಚಾಗಿದೆ. ವಚನ ಕೊಟ್ಟು ಬಿಜೆಪಿಯವರು ಚುನಾವಣೆಯಲ್ಲಿ ಹೆಚ್ಚುಸ್ಥಾನ ಗೆದ್ದರು. ಆಪರೇಷನ್ ಮಾಡಿ ಅಧಿಕಾರಕ್ಕೆ ಬಂದರು. ಬಲಿಷ್ಠ ಸರ್ಕಾರ ಇತ್ತಲ್ಲಾ, 600 ಭರವಸೆ ನೀಡಿ, ಕೇವಲ 50ನ್ನು ಮಾತ್ರ ಈಡೇರಿಸಿದ್ದಾರೆ. ಇನ್ನೂ 550 ಭರವಸೆ ಈಡೇರಿಕೆ ಬಾಕಿ ಇದೆ ಎಂದು ಟೀಕಿಸಿದರು.
ಜನ ಧೈರ್ಯದಿಂದ ಬದುಕಲಾಗದ ಸ್ಥಿತಿ ಸರ್ಕಾರ ನಿರ್ಮಾಣ ಮಾಡಿದೆ:ನಾವು ಆರು ತಿಂಗಳಿಂದ ಕೇಳುತ್ತಿರುವ ಯಾವುದೇ ಪ್ರಶ್ನೆಗೆ ಉತ್ತರ ನೀಡಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಯುವಕರು ಪ್ರಶ್ನೆ ಕೇಳಿದ್ದಾರೆ. ಗುತ್ತಿಗೆದಾರರು ದನಿ ಎತ್ತಿದ್ದಾರೆ. ಯಾವುದಕ್ಕೂ ಉತ್ತರ ಇಲ್ಲ. ಎಲ್ಲಾ ವರ್ಗದ ಜನ ಧೈರ್ಯದಿಂದ ಬದುಕಲಾಗದ ಸ್ಥಿತಿ ಸರ್ಕಾರ ನಿರ್ಮಾಣ ಮಾಡಿದೆ. 83,190 ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. 1850 ಕಂಪನಿ ಮುಚ್ಚುವ ಸ್ಥಿತಿ ತಲುಪಿವೆ. ಯಾರೂ ಇಲ್ಲಿ ಬಂದು ಹೂಡಿಕೆ ಮಾಡುತ್ತಿಲ್ಲ. ಅಕ್ಕ,ಪಕ್ಕದ ರಾಜ್ಯಕ್ಕೆ ಅಭಿವೃದ್ಧಿ ಹೋಗುತ್ತಿದೆ. ತಮಿಳುನಾಡಿ, ತೆಲಂಗಾಣಕ್ಕೆ ಎಷ್ಟು ಕೈಗಾರಿಕೆಗಳು ತೆರಳುತ್ತಿವೆ ಎಂದರೆ ರಾಜ್ಯಕ್ಕೆ ಅವಮಾನ ಆಗಲಿದೆ ಎಂದು ಹೇಳಿದರು.
ಆಡಳಿತ ಪಾಪದ ಕೊಡವನ್ನು ಜನರ ಮುಂದೆ ಇಡುತ್ತಿದ್ದೇವೆ:ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ನಕಲು ನಡೆಯುತ್ತಿದೆ. ಐಎಎಸ್, ಐಪಿಎಸ್ ಅಧಿಕಾರಿಗಳು ಜೈಲು ಸೇರಿದ ಇತಿಹಾಸವನ್ನು ಬಿಜೆಪಿ ಸರ್ಕಾರ ಸೃಷ್ಟಿಸಿದೆ. ರೈತರು, ಭ್ರಷ್ಟಾಚಾರ ಸೇರಿದಂತೆ ಯಾವುದೇ ವಿಚಾರದ ಮೇಲೆ ನಾವು ದನಿ ಎತ್ತಿದರೂ, ಕೇಸು ಹಾಕುತ್ತಿದ್ದಾರೆ. ನಾವು ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿವೆ. ಇವರ ಆಡಳಿತ ಪಾಪದ ಕೊಡವನ್ನು ಜನರ ಮುಂದೆ ಇಡುತ್ತಿದ್ದೇವೆ. ಇದಕ್ಕಾಗಿಯೇ ಜನರಿಗಾಗಿ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ. ಜನರ ಭಾವನೆ ಮುಂದಿಟ್ಟು ಹೆಜ್ಜೆ ಇಡುತ್ತಿದ್ದೇವೆ. ಜನರ ಬಳಿ ಮನವಿ ಮಾಡುತ್ತಿದ್ದು, ನಮ್ಮೊಂದಿಗೆ ನಿಮ್ಮ ಕೈ ಜೋಡಿಸಿ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದರು.
ನಿಮ್ಮ ಹಕ್ಕು ನಮ್ಮ ಹೋರಾಟ ಆಗಿದ್ದು, ವಿಶೇಷ ವೆಬ್ಸೈಟ್ ಸಹ ಆರಂಭಿಸುತ್ತಿದ್ದೇವೆ. ಪ್ರಜಾಧ್ವನಿ ಡಾಟ್ ಕಾಮ್ ಆರಂಭಿಸುತ್ತಿದ್ದು, ಜನ ಬೆಂಬಲ ಬೇಕು ಎಂದು ಮನವಿ ಮಾಡಿದರು. ಇದಾದ ಬಳಿಕ ವೆಬ್ಸೈಟ್ ಹಾಗೂ ಲೋಗೊ ಅನಾವರಣ ಮಾಡಲಾಯಿತು. ಬಿಜೆಪಿ ಸಕಾರದ ವಿರುದ್ಧದ ಚಾರ್ಜ್ ಶೀಟ್ ಬಿಡುಗಡೆ ಮಾಡಲಾಯಿತು. 9537224224 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದಾಗಿದೆ ಎಂದು ತಿಳಿಸಿದರು.