ಬೆಂಗಳೂರು :ಲಾಕ್‌ಡೌನ್ ನಡುವೆಯೂ ಫಿಟ್‌ನೆಸ್ ಕಾಪಾಡಿಕೊಳ್ಳಲು ಟೆಕ್ಕಿಯೊಬ್ಬರು ತಾವು ವಾಸಿಸುವ ಡಬಲ್ ಬೆಡ್ ರೂಮ್ ಮನೆಯನ್ನೇ ರನ್ನಿಂಗ್ ಟ್ರ್ಯಾಕ್ ಆಗಿ ಪರಿವರ್ತಿಸಿಕೊಂಡು, ನಿರಂತರವಾಗಿ 14 ತಾಸುಗಳ ಕಾಲ ಮನೆಯಲ್ಲಿ 110 ಕಿ.ಮೀ ಓಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಮನೆಯಲ್ಲಿ ಇದ್ದುಕೊಂಡೇ 110 ಕಿ.ಮೀ ಮ್ಯಾರಥಾನ್ ಓಟ ಪೂರ್ಣಗೊಳಿಸಿದ ಟೆಕ್ಕಿ.. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಪ್ರದೀಪ್ ಸೇನಾಪತಿ ಎಂಬುವರು ಈ ದಾಖಲೆ ನಿರ್ಮಿಸಿದ್ದಾರೆ. ಪ್ರತಿನಿತ್ಯ ವ್ಯಾಯಾಮ, ಜಾಗಿಂಗ್ ನಡೆಸುವವರಿಗೆ ಲಾಕ್‌ಡೌನ್ ಆದೇಶ ಮುಳ್ಳಾಗಿ ಪರಿಣಮಿಸಿದೆ. ಎಷ್ಟೋ ಜನರು ಜಾಗಿಂಗ್ ನಿಲ್ಲಿಸಿ ಮನೆಯಲ್ಲಿದ್ದಾರೆ. ಇವರ ನಡುವೆ ಭಿನ್ನವಾಗಿ ಕಾಣುವ ಪ್ರದೀಪ್, ಏ.4ರ ಮುಂಜಾನೆ ಮ್ಯಾರಥಾನ್ ಓಟ ಆರಂಭಿಸಿ ರಾತ್ರಿ 9.45ಕ್ಕೆ ಪೂರ್ಣಗೊಳಿಸಿದ್ದಾರೆ. ಈ ಅವಧಿಯಲ್ಲಿ 110 ಕಿ.ಮೀ ಕ್ರಮಿಸಲು 17 ಗಂಟೆ 15 ನಿಮಿಷ ತೆಗೆದುಕೊಂಡಿದ್ದಾರೆ. ಇದರಲ್ಲಿ ತಿಂಡಿ, ಊಟ, ತರಕಾರಿ ಖರೀದಿ ಹೊರಗೆ ಹೋಗಿದ್ದು, ಪಿಸಿಯೊ, ಕಾಲಿಗೆ ಮಸಾಜ್ ಹೊರತುಪಡಿಸಿ 14 ಗಂಟೆ 7 ನಿಮಿಷಗಳಲ್ಲಿ 110 ಕಿ.ಮೀ ಓಟ ಕ್ರಮಿಸಿದ್ದಾರೆ.
ಒಡಿಶಾ ಮೂಲದ ಪ್ರದೀಪ್ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಹೂಡಿ ಬಳಿ ಅಪಾರ್ಟ್‌ಮೆಂಟ್‌ವೊಂದರ ಡಬಲ್ ಬೆಡ್ ರೂಂನಲ್ಲಿರುವ ಇವರು ಮನೆಯ ಹಾಲ್ ಹಾಗೂ ಒಂದು ಬೆಡ್ ರೂಮ್ ನಲ್ಲಿಯೇ ಓಡಿ ದಾಖಲೆ ನಿರ್ಮಿಸಿದ್ದಾರೆ. ಸಕ್ಕೆರೆ ಖಾಯಿಲೆ ಪರಿಣಾಮ 2015ರಿಂದ ಓಟದ ಕಡೆ ಒಲವು ಮೂಡಿಸಿಕೊಂಡ ಇವರು 45 ಮ್ಯಾರಥಾನ್ ಓಟಗಳಲ್ಲಿ ಭಾಗಿಯಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇವರು ಅಪಾರ್ಟ್‌ಮೆಂಟ್‌ನಲ್ಲಿ ವಾಕರ್ಸ್ ಅಸೋಸಿಯೇಷನ್ ಮಾಡಿಕೊಂಡಿದ್ದು ಕೊರೊನಾ ಕಾರಣಕ್ಕಾಗಿ ಮನೆಯಂಗಳದಲ್ಲಿ ವಾಕ್ ಮಾಡುವುದನ್ನು ನಿಷೇಧಿಸಲಾಯಿತು. ಆಗ ಮನೆಯಲ್ಲಿ ನಿಯಮಿತವಾಗಿ ವಾಕಿಂಗ್ ಮಾಡಿ ನಂತರ ಹಗುರವಾಗಿ ಪ್ರತಿದಿನ ಓಟ ನಡೆಸುತ್ತಿದ್ದ ಇವರು ಬೆಳಗ್ಗೆಯಿಂದ ರಾತ್ರಿವರೆಗೆ ಓಡಿದರೆ ಎಷ್ಟು ಕಿ.ಮೀ ಓಡಬಹುದು ಎಂದುಕೊಂಡು ಏ.4ರಂದು ಮುಂಜಾನೆಯಿಂದ ರಾತ್ರಿವರೆಗೆ ಓಡಿದ್ದಾರೆ. ಬರಿಗಾಲಿನಲ್ಲಿ ಓಡುವಾಗ ಕೆಳಗಿನ ಮನೆವರೆಗೆ ಸದ್ದು ಆಗಬಾರದು ಎಂದುಕೊಂಡು ಕಾಲಿಗೆ ಸಾಕ್ಸ್ ಧರಿಸಿ ಓಡಿ 110 ಕಿ.ಮೀ ಕ್ರಮಿಸಿದ್ದಾಗಿ, ಅದು ಸ್ಮಾರ್ಟ್ ವಾಚ್‌ನಲ್ಲಿ ದಾಖಲಾಗಿದೆ ಎಂದು ಈಟಿವಿ ಭಾರತ್‌ಗೆ ಪ್ರದೀಪ್ ತಿಳಿಸಿದರು.